ಬೆಂಗಳೂರು : ಜ.04 : ವರ್ಷಾಂತರದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಸೇರಿದಂತೆ ಎಲ್ಲಾ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಈ ನಡುವೆ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡಗಳಲ್ಲ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ಬದಲಾಗಿದ್ದು, ವಿದೇಶಿ ತಂಡಗಳು ಸಹ ಸ್ಪಿನ್ ಬೌಲಿಂಗ್ ಆಡುವುದನ್ನ ಕಲಿತಿವೆ. ಹೀಗಾಗಿ 2011ರಲ್ಲಿದ್ದ ಕ್ರಿಕೆಟ್‌ಗೂ ಇಂದಿಗೂ ಸಾಕಷ್ಟು ಬದಲಾವಣೆಯಾಗಿದೆ. ಏಷ್ಯಾದಲ್ಲಿನ ವಾತಾವರಣ ಸಬ್‌ಕಾಟಿನೆಂಟಲ್ ತಂಡಗಳ ಆಟಗಾರರಿಗೆ ಅನುಕೂಲ ಕಲ್ಪಿಸಬಹುದು. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿ಼ಲೆಂಡ್ ತಂಡದ ಆಟಗಾರರು ಸಹ ಸ್ಪಿನ್ ಬೌಲಿಂಗ್‌ಗೆ ಉತ್ತಮ ರೀತಿಯಲ್ಲಿ ಆಡುವುದನ್ನ ಅರಿತಿದ್ದಾರೆ ಎಂದರು.
ಮುಂದುವರೆದು ಮಾತನಾಡಿದ ಅವರು, ವಿದೇಶಿ ಆಟಗಾರರಿಗೆ ಐಪಿಎಲ್ ಪಂದ್ಯಾವಳಿ ಸಾಕಷ್ಟು ಅನುಕೂಲ ಕಲ್ಪಿಸಿದೆ. ಹೀಗಾಗಿಯೇ ಗ್ಲೆನ್ ಮ್ಯಾಕ್ಸ್‌ವೆಲ್, ಜಾನಿ ಬೈರ್ಸ್ಟೋವ್ ಸೇರಿದಂತೆ ಹಲವು ಆಟಗಾರರು ಸ್ಪಿನ್ ಬೌಲಿಂಗ್ ಎದುರು ಉತ್ತಮವಾಗಿ ಆಡುತ್ತಿದ್ದಾರೆ ಎಂದ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾದ ಪ್ರಮುಖ ಆಟಗಾರರು ಯಾವುದೇ ಏಕದಿನ ಸರಣಿಗಳಿಂದ ವಿಶ್ರಾಂತಿ ಪಡೆಯಬಾರದು. ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಎಲ್ಲಾ ಆಟಗಾರರು ಏಕದಿನ ಕ್ರಿಕೆಟ್ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.




