ದಾವಣಗೆರೆ ; ಜ.06: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರ್ನಾಟಕ ವಿಧಾನಸಭೆ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದು ಎಲ್ಲಾ ಸಮುದಾಯದ ಮತಗಳಿಗೆ ಗಾಳ ಹಾಕಿದ್ದಾರೆ. ಅದರಂತೆ ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠಕ್ಕೆ ಇಂದು ರಾಜ್ಯ ಬಿಜೆಪಿ ನಾಯಕರ ಜೊತೆಗೂಡಿ ಭೇಟಿ ನೀಡಿದ್ದರು.

ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವ್ರು ತಮ್ಮ ಮಠಕ್ಕೆ ಬರುತ್ತಾರೆ ಅನ್ನೋದು ಮುಂಚಿತವಾಗಿಯೇ ಗೊತ್ತಿದ್ದರು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಕಾರ್ಯ ನಿಮಿತ್ತ ಹರಪನಹಳ್ಳಿಗೆ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿದೆ. ನಡ್ಡಾ ಭೇಟಿ ವೇಳೆ ಮಠದಲ್ಲಿ ಇರದೇ ಗೈರಾಗಿದ್ದರು. ಬಿಜೆಪಿ ಮೇಲೆ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳು ಮುನಿಸಿಕೊಂಡಿದ್ದಾರಾ ಅನ್ನೋ ಅನುಮಾನಗಳು ಸಹಜವಾಗಿವೆ ಮೂಡಿವೆ. ಸ್ವಾಮೀಜಿ ಇಲ್ಲದೆ ಮಠಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಸ್ವಾಮೀಜಿ ಜೊತೆ ಚರ್ಚಿಸದೇ ವಾಪಸ್ ತೆರಳಿದ್ದಾರೆ.

ಸ್ವಾಮೀಜಿ ಗೈರು ಹಿನ್ನೆಲೆಯಲ್ಲಲಿ ನಡ್ಡಾರನ್ನು ಬಿಜೆಪಿ ಶಾಸಕ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡ ಎಸ್ ವಿ ರಾಮಚಂದ್ರಪ್ಪ ಸ್ವಾಗತ ಕೋರಿದರು. ಮಠಕ್ಕೆ ಭೇಟಿ ನೀಡಿ ಪುಣ್ಯಾನಂದ ಶ್ರೀಗಳ ಪ್ರತಿಮೆಗೆ ಪೂಜೆ ಸಲ್ಲಿಸಿ ಜೆ.ಪಿ.ನಡ್ಡಾ ಮತ್ತು ಬಿಜೆಪಿ ನಾಯಕರು ತೆರಳಿದರು. ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿ ವೇಳೆ ಪ್ರಸನ್ನಾನಂದಪುರಿ ಸ್ವಾಮೀಜಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.




