ಬೆಂಗಳೂರು : ಜ.06: ಕಾಲ ಬದಲಾಗುತ್ತಿದೆ. ಜನರು ಶಿಕ್ಷಣವಂತರಾಗುತ್ತಿದ್ದು, ತಮ್ಮಲ್ಲಿರೋ ಮೌಢ್ಯತೆಯನ್ನು ದೂರ ಮಾಡುತ್ತಿದ್ದಾರೆ. ಆದ್ರೆ ಅಲ್ಲೊಂದು ಇಲ್ಲೊಂದು ನಡೆಯೋ ಘಟನೆಗಳು ಮನುಕುಲದಲ್ಲಿ ಮನುಷ್ಯತ್ವವೇ ಇಲ್ಲಾ ಅನ್ನೋದನ್ನು ಸಾರಿ ಸಾರಿ ಹೇಳುತ್ತಿವೆ. ಹೌದು ಬೆಂಗಳೂರಿನಲ್ಲಿ ಮಹಿಳೆಯೋರ್ವಳ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಲಾಗಿದೆ. ಅದು ಕೂಡ ಆಕೆ ದೇಗುಲಕ್ಕೆ ಸ್ನಾನ ಮಾಡಿ ಬಂದಿಲ್ಲ ಅನ್ನೋ ಕಾರಣಕ್ಕೆ ಅಂತೆ. ಇಂತದ್ದೊಂದು ಹೀನ ಕೃತ್ಯ ನಡೆದಿರೋದು ಸಿಲಿಕಾನ್ ಸಿಟಿ ಅಮೃತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಕಳೆದ ಡಿಸೆಂಬರ್ 21ರಂದು ಹೇಮಾವತಿ ಎಂಬ ಮಹಿಳೆ ಅಮೃತಹಳ್ಳಿ ಬಳಿ ಇರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ತೆರಳಿದ್ದಾಳೆ.

ಈ ವೇಳೆ ದೇವಸ್ಥಾನದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ ಎಂಬಾತ ಹೇಮಾವತಿ ಬರುತ್ತಿದ್ದಂತೆ ಅಡ್ಡಗಟ್ಟಿ ನೀನು ಸ್ನಾನ ಮಾಡ್ದೆ ಇರೋ ತರ ಇದೀಯಾ..ನೀನು ಕೀಳು ಜಾತಿ. ನೋಡಲು ವಿಚಿತ್ರವಾಗಿ ಇದ್ದೀಯಾ ಅಂತಾ ನಿಂದಿಸಿದ್ದಾನೆ.

ಅಷ್ಟೇ ಅಲ್ಲದೇ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಬಿಡೋದಿಲ್ಲಾ ಅಂತಾ ಹೇಳಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ದೇವರ ಎದುರೇ ಮಹಿಳೆಯ ಜಡೆ ಹಿಡಿದು ಹೊರಗೆ ಎಳೆದೊಯ್ದು ಬಿಸಾಕಿದ್ದಾನೆ. ಅಷ್ಟೇ ಅಲ್ಲದೇ ದೇವಸ್ಥಾನದ ಆವರಣದಲ್ಲಿ ಕೂಡ ಮಹಿಳೆ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈವೇಳೆ ದೇವಸ್ಥಾನದ ಅರ್ಚಕ ಮಹಿಳೆ ಮೇಲಿನ ಹಲ್ಲೆ ಯತ್ನವನ್ನು ತಡೆದಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ದೇವಾಲಯದಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಈ ಸಂಬಂಧ ಅಮೃತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದ ಮಹಿಳೆ ದೂರನ್ನು ಹಿಂಪಡೆದಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಆದ್ರೆ ದೇಗುಲದ ಧರ್ಮದರ್ಶಿ ಮುನಿಕೃಷ್ಣ ಈ ಕೇಸ್ ಬಗ್ಗೆ ಹೇಳೋದು ಬೇರೆಯೇ ಆಗಿದೆ. ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆ ನನಗೆ ದೇವರು ಬರುತ್ತೆ.

ವೆಂಕಟೇಶ್ರನ ನನ್ನ ಪತಿ. ನಾನು ಗರ್ಭಗುಡಿಯಲ್ಲಿ ವೆಂಕಟೇಶ್ವರನ ಪಕ್ಕ ಕೂರಬೇಕೆಂದು ಪಟ್ಟು ಹಿಡಿದ್ದಳಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅರ್ಚಕರ ಮೇಲೆಯೇ ಉಗಿದಿದ್ದಾಳಂತೆ ಮಹಿಳೆ. ಎಷ್ಟೇ ಮನವಿ ಮಾಡಿಕೊಂಡ್ರು ಹೋಗದಿದ್ದಾಗ ಥಳಿಸಿದ್ದೇವೆ ಎಂದಿರುವ ಆಡಳಿತ ಮಂಡಳಿಯವರು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರಂತೆ. ಮಹಿಳೆ ಹೇಳಿಕೆ ಸತ್ಯವೋ ಅಥವೋ ಧರ್ಮದರ್ಶಿ ಹೇಳಿಕೆ ಸತ್ಯವೋ ತಿಳಿದಿಲ್ಲ.ಪೊಲೀಸ್ ತನಿಖೆಯಿಂದ ಈ ಬಗ್ಗೆ ಸತ್ಯಾಂಶ ತಿಳಿಯಬೇಕಾಗಿದೆ. ಒಟ್ಟಿನಲ್ಲಿ ಮಹಿಳೆ ಮೇಲೆ ನಡೆದಿರೋ ಹಲ್ಲೆ ವಿಡಿಯೋ ವೈರಲ್ ಆಗಿದೆ.




