ಬೆಂಗಳೂರು : ನಾಡಗೀತೆ ರಾಗ ಸಂಯೋಜನೆ ಬಗ್ಗೆ ಹಲವರಲ್ಲಿ ಗೊಂದಲ ಇದೆ, ಇದನ್ನು ಸರ್ಕಾರ ಸರಿಪಡಿಸಬೇಕು ಎಂದು ಶಾಸಕ ಎಂ ಪಿ ಕುಮಾರ್ ಸರ್ಕಾರವನ್ನು ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ಮೂಡಿಗೆರೆಯ ಶಾಸಕ ಎಂ ಪಿ ಕುಮಾರ್ ಸ್ವಾಮಿ ಸರ್ಕಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ರಾಗ ಸಂಯೋಜನೆ ಗೊಂದಲ ಬಗ್ಗೆ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ. ದೊಡ್ಡರಂಗೇಗೌಡ, ಹೆಚ್ ಆರ್ ಲೀಲಾವತಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ, ಸಮಿತಿ ಹದಿನೈದು ದಿನಗಳಲ್ಲಿ ವರದಿ ನೀಡಲಿದೆ ಎಂದು ತಿಳಿಸಿದರು.
ವರದಿ ಸರ್ಕಾರಕ್ಕೆ ಸಲ್ಲಿಸಿದ ನಂತರ ಎಲ್ಲ ಗೊಂದಲಗಳು ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು. ಗಾಂಧಿ ಜಯಂತಿ ಒಳಗಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ನಾಡಗೀತೆ ನಮ್ಮ ಹೆಮ್ಮೆ, ಒಬ್ಬೊಬ್ಬರು ಒಂದು ರೀತಿಯಲ್ಲಿ ನಾಡಗೀತೆ ಹಾಡುತ್ತಿದ್ದಾರೆ, ಇದರ ಬಗ್ಗೆ ಒಂದು ಸೂಕ್ತ ತೀರ್ಮಾನ ಮಾಡುವಂತೆ ಎಂಪಿ ಕುಮಾರಸ್ವಾಮಿ ಆಗ್ರಹಿಸಿದರು.
ಈ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶ ಮಾಡಿ, ಅನೇಕರು ಬಹಳ ವರ್ಷದಿಂದ ಈ ಬಗ್ಗೆ ಪ್ರಯತ್ನ ನಡೆಸುತ್ತಿದ್ದಾರೆ, ನಿಮ್ಮ ಅವಧಿಯಲ್ಲಿ ಪೂರ್ಣಗೊಳಿಸಿ ಎಂದು ಸಚಿವರಿಗೆ ಸ್ಪೀಕರ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.