ಬೆಂಗಳೂರು : ಹೊಸದುರ್ಗ ಕ್ಷೇತ್ರದಲ್ಲಿ ಸುಮಾರು ೧೮ -೨೦ ಸಾವಿರ ಜನರನ್ನು ಮತಾಂತರ ಮಾಡಲಾಗಿದೆ, ನನ್ನ ಹೆತ್ತ ತಾಯಿಯನ್ನು ಕೂಡಾ ಮತಾಂತರ ಮಾಡಲಾಗಿದೆ ಎಂದು ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಶೂನ್ಯವೇಳೆಯಲ್ಲಿ ಈ ಪ್ರಸ್ತಾಪವನ್ನು ಮಂಡಿಸಿದ ಶಾಸಕರು, ಕ್ರಿಶ್ಚಿಯನ್ ಮಿಷನರಿಗಳಲ್ಲಿ ಬ್ರೈನ್ ವಾಷ್ ಮಾಡಲಾಗ್ತಿದೆ, ಮನೆಯಲ್ಲಿ ಕುಂಕುಮ ಇಡಬಾರದು ಅಂತಾ ಹೇಳಿ ಕಳುಹಿಸಿದ್ದಾರೆ, ನನ್ನ ತಾಯಿಯ ಮೊಬೈಲ್ ರಿಂಗ್ ಟೋನ್ ಕೂಡಾ ಕ್ರಿಶ್ಚಿಯನ್ ಹಾಡುಗಳನ್ನ ಹಾಕಿದ್ದಾರೆ, ನಮ್ಮ ಮನೆಯಲ್ಲಿ ಪೂಜೆ ಮಾಡುವ ಅವಕಾಶವನ್ನೇ ನಾನು ಕಳೆದುಕೊಂಡಿದ್ದೇನೆ ಎಂದು ಸದನಕ್ಕೆ ತಿಳಿಸಿದರು.
ತಾಯಿ ಆರೋಗ್ಯ ಸರಿಯಿಲ್ಲ ಅಂತ ಚರ್ಚ್ ಗೆ ಕರೆದುಕೊಂಡು ಹೋಗಿದ್ರು, ಅಲ್ಲಿ ಅವರ ಬ್ರೈನ್ ವಾಸ್ ಮಾಡಿದ್ದಾರೆ, ನಾವು ತಾಯಿಗೆ ಒತ್ತಾಯ ಮಾಡಿದ್ರೆ ಸಾಯುವ ಮಾತನಾಡುತ್ತಾರೆ, ನಾವು ಬಹಳ ಸಂಕಷ್ಟಕ್ಕೆ ಸಿಲುಕಿದ್ದೇವೆ, ನಾವೇ ಹೀಗಾದರೆ ಸಾಮಾನ್ಯ ಜನರು ಮತ್ತು ದಲಿತರ ಪರಿಸ್ಥಿತಿ ಏನು ಎಂದು ಶಾಸಕರು ಪ್ರಶ್ನಿಸಿದರು.
ಗೂಳಿಹಟ್ಟಿ ಅವರ ಬೆಂಬಲಕ್ಕೆ ನಿಂತ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮತಾಂತರವನ್ನು ಹತ್ತಿಕ್ಕಲು ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರೂಪಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಇದು ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಇದೆ, ಇದೊಂದು ಸಾಮಾಜಿಕ ಪಿಡುಗು, ಮತಾಂತರ ತಡೆಯೋ ಬಗ್ಗೆ ಒಂದು ಬಿಲ್ ತರುವ ಸಂಬಂಧ ಯೋಚನೆ ಮಾಡಲಾಗುತ್ತಿದೆ, ಯಾರಾದರೂ ಸ್ವ ಇಚ್ಛೇಯಿಂದ ಮತಾಂತರ ಆದರೇ ಅಭ್ಯಂತರ ಇಲ್ಲ, ಆದರೇ ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುವುದು ಅಕ್ಷಮ್ಯ ಅಪರಾಧ ಎಂದು ಗೃಹ ಸಚಿವರು ಸದನಕ್ಕೆ ವಿವರಿಸಿದರು.