ಬೆಂಗಳೂರು :ಜ.10: ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ತಯಾರಿ ಮಾಡಿಕೊಳ್ಳುತ್ತಿರುವ ಟೀಂ ಇಂಡಿಯಾ ಪ್ರಸಕ್ತ ವರ್ಷದಲ್ಲಿ ಆಡುತ್ತಿರುವ ಮೊದಲ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.
ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ
ಆರಂಭಗೊಳ್ಳಲಿದೆ.
ಇತ್ತೀಚೆಗೆ ನಡೆದ T20 ಸರಣಿಯಲ್ಲಿ ಗೆಲುವಿನ ನಗೆಬೀರಿರುವ ಭಾರತ, ಆತ್ಮವಿಶ್ವಾಸದ ಅಲೆಯಲ್ಲಿದ್ದರೆ. ಸರಣಿ ಸೋಲಿನ ಆಘಾತ ಕಂಡಿರುವ ಶ್ರೀಲಂಕಾ ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ಹೊಂದಿದೆ. ಉಭಯ ತಂಡಗಳ ನಡುವಿನ ಕದನಕ್ಕೆ ರಾಜ್‌ಕೋಟ್‌ನ ಬರ್ಸಾಪಾರಾ ಕ್ರಿಕೆಟ್ ಮೈದಾನ ವೇದಿಕೆಯಾಗಿದೆ. ಸರಣಿಯ ಮುಂದಿನ ಪಂದ್ಯಗಳು ಜನವರಿ 12 ಮತ್ತು 15ರಂದು ನಡೆಯಲಿದೆ.
ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಟಿ20 ಸರಣಿ ಗೆದ್ದಿದ್ದ ಟೀಂ ಇಂಡಿಯಾ, ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಇದರೊಂದಿಗೆ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರುಗಳು ತಂಡಕ್ಕೆ ಮರಳಿದ್ದು ತಂಡದ ಬಲವನ್ನ ಹೆಚ್ಚಿಸಿದೆ. ಹಿರಿಯ ಆಟಗಾರರ ಕಮ್‌ಬ್ಯಾಕ್‌ನಿಂದಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ಬಲ ದ್ವಿಗುಣಗೊಂಡಿದೆ. ಆದರೆ ನಾಲ್ವರು ಅನುಭವಿ ಆಟಗಾರರು ತಂಡಕ್ಕೆ ಮರಳಿರುವುದು ತಂಡದ ಪ್ಲೇಯಿಂಗ್ ಇಲವೆನ್ ಆಯ್ಕೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ನಾಯಕ ರೋಹಿತ್ ಶರ್ಮ ಆರಂಭಿಕನಾಗಿ ಕಣಕ್ಕಿಳಿದರೆ ಇವರೊಂದಿಗೆ ಇಶಾನ್ ಕಿಶನ್, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಈ ಮೂವರಲ್ಲಿ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬ ಕುತೂಹವಿದೆ. ಉಳಿದಂತೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಆಲ್ರೌಂಡರ್ ಸ್ಥಾನದಲ್ಲಿ ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ಇದೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಆಡುವುದು ಬಹುತೇಕ ಖಚಿತವಾಗಿದ್ದು, ಇವರೊಂದಿಗೆ ಸಿರಾಜ್, ಅರ್ಶದೀಪ್ ಹಾಗೂ ಉಮ್ರಾನ್ ಮಲ್ಲಿಕ್ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಕಾದುನೋಡಬೇಕಿದೆ.
ಮತ್ತೊಂದೆಡೆ ಟಿ20 ಸರಣಿಯಲ್ಲಿ 2-1ರಿಂದ ಸೋತರು, ಪ್ರವಾಸಿ ಲಂಕಾ ಪಡೆ ಸಾಕಷ್ಟು ಪಾಸಿಟಿವ್ ಅಂಶಗಳೊಂದಿಗೆ ಏಕದಿನ ಸರಣಿಯತ್ತ ಮುಖ ಮಾಡಿದೆ. ಹೀಗಾಗಿ ಏಕದಿನ ಸರಣಿಯಲ್ಲಿ ಭಾರತಕ್ಕೆ ತಿರುಗೇಟು ನೀಡುವ ಲೆಕ್ಕಾಚಾರದೊಂದಿಗೆ ಲಂಕಾ ತಂಡ ಸಜ್ಜಾಗಿದೆ.
ಶ್ರೀಲಂಕಾ ನಾಯಕ ಸದುನ್ ಶನಕಾ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದು, ಇವರಿಗೆ ಪಥುಮ್ ನಿಸ್ಸಾಂಕಾ ಅವರಿಂದ ಉತ್ತಮ ಸಾಥ್ ಸಿಗಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಚರಿತ ಅಸಲಂಕಾ ರನ್ ಮಳೆ ಸುರಿಸಬೇಕಿದ್ದರೆ. ಬೌಲಿಂಗ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ಜೆಫ್ರೆ ವಾಂಡೆರ್ಸೆ, ಮಹೀಶ್ ತೀಕ್ಷಣ, ವನಿಂದು ಹಸರಂಗ ಅವರುಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.




