ಬೆಂಗಳೂರು : ನಗರದ ವಸತಿಗೃಹವೊಂದರಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಗರದ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ಘಟನೆಯಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಸ್ಮಿಕವಾಗಿ ಆಶ್ರೀತ ಅಪಾರ್ಟ್ ಮೆಂಟ್ ನ ಮನೆಯಲ್ಲಿ ಬೆಂಕಿ ಹೊತ್ತಿ ಉರಿಯಲು ಪ್ರಾರಂಭವಾಗಿತ್ತು. ಕೂಡಲೇ ಅಗ್ನಿಶಾಮಕದಳದ ಮೂರು ವಾಹನ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ.

ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸ್ಥಳೀಯರು ಮತ್ತು ಇನ್ನಿತರ ಮನೆಯವರು ಆತಂಕ್ಕೀಡಾಗಿದ್ದರು. ಮನೆಯಿಂದ ಆಚೆ ಬಂದು, ಹೆದರಿ ನಿಂತಿದ್ದರು. ಮನೆಯ ಇಡೀ ರಸ್ತೆಯ ತುಂಬೆಲ್ಲಾ ಜನ ಸೇರಿದ್ದರಿಂದ ಅವರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.
ಕೂಡಲೇ ಸ್ಥಳಕ್ಕೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ಆಗಮಿಸಿದ್ದರು. ಘಟನೆಯಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಕ್ಕಪಕ್ಕದವರ ಮಾಹಿತಿ ಪ್ರಕಾರ ಸಿಲಿಂಡರ್ ಸ್ಫೋಟವಾಗಿಲ್ಲ, ಯಾವುದೇ ಸ್ಫೋಟದ ಸದ್ದು ಕೇಳಿ ಬಂದಿಲ್ಲ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ನಿನ್ನೆ ತಾನೇ ಅಮೆರಿಕಾದಿಂದ ಮನೆಯವರು ಬಂದಿದ್ದರು. ಲಕ್ಮೀ ದೇವಿ , ಭಾಗ್ಯ ದೇವಿ ಇಬ್ಬರು ಬೆಂಕಿಯ ಕೆನ್ನಾಲಗೆಗೆ ತುತ್ತಾಗಿದ್ದಾರೆ. ಬೆಂಕಿ ಹತ್ತಿಕೊಂಡ 6 ನಿಮಿಷದಲ್ಲಿ ಅಗ್ನಿ ಶಾಮಕ ದಳ ಬಂದಿದೆ, ದೊಡ್ಡ ಮಟ್ಟದ ಬೆಂಕಿ ಹಿನ್ನೆಲೆಯಲ್ಲಿ ಯಾರು ಕೂಡ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ. ವಿಧಿವಿಜ್ಞಾನ ತಜ್ಞರು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.