ರಾಕಿ ಬಾಯ್.. ರಾಕಿ ಬಾಯ್… ಎಂದು ಕೆಜಿಎಫ್ ಸಿನಿಮಾದಲ್ಲಿ ಗುಡುಗಿದ್ದ ಯಶ್ ಸ್ಟೈಲಿಗೆ ಇಡೀ ಸ್ಯಾಂಡಲ್ ವುಡ್ ಬೆರಗಾಗಿತ್ತು. ಅಯ್ಯೋ ಕನ್ನಡ ಸಿನಿಮಾನಾ ಅಂತ ಮೂಗು ಮುರಿಯುತ್ತಿದ್ದ ಜನರಿಗೆ ಸೂಕ್ತ ಉತ್ತರ ನೀಡಿ, ಬಾಕ್ಸ್ ಆಫೀಸ್ ನಲ್ಲಿ ಯಶ್ ಸಕತ್ ಸದ್ದು ಮಾಡಿದ್ದರು.
ಇಷ್ಟೆಲ್ಲಾ ಸದ್ದು ಸುದ್ದಿ ಮಾಡಿದರೂ ನಟ ಯಶ್ ಗೆ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಅವರೇ ಹೇಳಿಕೊಂಡಿದ್ದು, ಟೀಕಾಕಾರರಿಗೆ ಖಡಕ್ ಸಂದೇಶವನ್ನೂ ತಮ್ಮದೇ ಆದ ರೀತಿಯಲ್ಲಿ ರವಾನಿಸಿದ್ದಾರೆ.

ಕೆಜಿಎಫ್ ಗೆಲುವಿನ ಬಳಿಕ ಯಶ್ ಯಾಕೆ ಯಾವ ಸಿನಿಮಾ ಮಾಡುತ್ತಿಲ್ಲ. ಯಶ್ ಫ್ಲಾಪ್ ಆಗಬಹುದು ಎಂಬ ಭಯ ಕಾಡಿರಬಹುದು. ಈಗ ಕೆಜಿಎಫ್ 3 ಸಿನಿಮಾಗಾಗಿ ಮಾತ್ರ ಕಾಯುತ್ತಿದ್ದಾರೆ ಏನೋ.. ಎಂದೆಲ್ಲಾ ಪ್ರಶ್ನೆಗಳು ಎದುರಾಗಿದ್ದು, ಇದಕ್ಕೆ ಮುಂದಿನ ದಿನ ಸರಿಯಾದ ಉತ್ತರ ಕೊಡುವೆ ಎಂದಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಯಶ್, ಕೆಲವರು ನನ್ನ ವಿರುದ್ಧ ಮನಬಂದಂತೆ ಮಾತನಾಡುತ್ತಿದ್ದಾರೆ. ಆ ಬಗ್ಗೆ ನನಗೇನೂ ಬೇಸರ ಇಲ್ಲ. ಗೆಲುವನ್ನು ನಿಭಾಯಿಸುವುದಕ್ಕಿಂತ, ಹೊಸ ಹೊಸ ಗೆಲುವನ್ನು ಕಾಣುವುದು ನನಗಿಷ್ಟ. ಹೋರಾಡುತ್ತ ನಾನು ಸತ್ತರೂ ನನಗೇನೂ ಬೇಸರ ಇಲ್ಲ. ಆದರೆ ನಾನು ಹೋರಾಟದಲ್ಲೇ ಇದ್ದೀನಲ್ಲ ಅದು ಮುಖ್ಯವಾಗಬೇಕು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ
ಜನರು ಈಗಲೂ ಕೇಳುತ್ತಾರೆ.

ಹೊಸ ಸಿನಿಮಾ ಘೋಷಿಸಲು ಇಷ್ಟೊಂದು ಸಮಯ ಏಕೆ ತೆಗೆದುಕೊಳ್ಳುತ್ತಿದ್ದೀರಿ? ನೀವು ಮುಂದೇನು ಮಾಡುತ್ತೀರಿ? ಗಡ್ಡ ತೆಗೆದರೆ ಜನರು ನಿಮ್ಮನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಈ ರೀತಿಯ ಪ್ರಶ್ನೆಗಳು, ಮಾತುಗಳು ನನ್ನ ಗೆಳೆಯರ ವಲಯದಿಂದಲೇ ಬಂದಿದೆ. ಆದರೆ ಗೆದ್ದಿರುವುದನ್ನು ನಿಭಾಯಿಸುವುದಕ್ಕಿಂತ ಹೊಸದನ್ನು ಗೆಲ್ಲುವುದು ನನಗಿಷ್ಟ. ಎಗ್ಸೈಟ್ಮೆಂಟ್ ಕೊಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.




