ಹೈದ್ರಾಬಾದ್ ;ಜ.12: ನಿನ್ನೆಯಷ್ಟೇ ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆದ ಸಮಾರಂಭದಲ್ಲಿ RRR ಸಿನಿಮಾ ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದ್ದು, ಅದರಲ್ಲಿ ಭಾಗವಹಿಸಿದ್ದ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನ ಮಗುವಿನ ಜೊತೆಗೆ ಅವಾರ್ಡ್ ನ ಸಂಭ್ರಮವನ್ನು ಅನುಭವಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಭಾವುಕ ವಾಗಿ ಬರೆದುಕೊಂಡಿದ್ದಾರೆ.
ಆರ್ ಆರ್ ಆರ್ ಸಿನಿಮಾವು ಉಕ್ರೇನ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ರಾಮ್ ಚರಣ್ ಜೊತೆಗೆ ಉಪಸನಾ ಸಹ ಇದ್ದರು. ಈ ಸಂದರ್ಭದಲ್ಲಿ ಅದನ್ನು ನೆನಪು ಮಾಡಿಕೊಂಡಿರುವ ಅವರು, ಉಕ್ರೇನ್ ನಿಂದ ಗೋಲ್ಡನ್ ಗ್ಲೋಬ್ ಅವಾರ್ಡ್ ತನಕ ನಾನು ಸಾಕಷ್ಟು ಕಲಿತಿದ್ದೇನೆ. ಪರಿಶ್ರಮ ಮತ್ತು ಪ್ರತಿಫಲದ ಬಗ್ಗೆ ಅರಿತಿದ್ದೇನೆ. ಅಲ್ಲದೆ, ಈ ಸಮಯದಲ್ಲಿ ಆಲೋಚನೆಯ ಬಗೆಯು ಬಹಳಷ್ಟು ಬದಲಾಗಿದೆ ಎಂದು ಹೇಳಿಕೊಂಡಿರುವ ಅವರು, ಈ ನನ್ನ ಖುಷಿಯ ಪ್ರಯಾಣದಲ್ಲಿ ನನ್ನ ಕಂದ ಸಹಜೊತೆ ಜೊತೆಗೆ ನಡೆದಿದ್ದು ಹೆಚ್ಚು ಖುಷಿ ಕೊಡುತ್ತಿದೆ. ನಾನು ಬಹಳ ಭಾವುಕಳಾಗಿದ್ದೇನೆ ಎಂದಿದ್ದಾರೆ.

ನಿನ್ನೆ ಪಡೆದುಕೊಂಡಂತಹ ಪ್ರಶಸ್ತಿಯು ನಮ್ಮ ಕುಟುಂಬಕ್ಕೆ ಅಥವಾ ಸಿನಿಮಾ ತಂಡಕ್ಕೆ ಸಂದ ಗೌರವವಲ್ಲ. ಇದು ಇಡೀ ದೇಶಕ್ಕೆ ಸಂದ ಗೌರವವಾಗಿದೆ. ಇಡೀ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದ್ದಕ್ಕೆ ದೇಶವು ಹೆಮ್ಮೆ ಪಡುವಂತಹ ಗೆಲುವು ಇದಾಗಿದೆ. ಇಂತಹ ಅದ್ಭುತವಾದ ಗೆಲುವಿನಲ್ಲಿ ಭಾಗಿದಾರಿಯಾಗಲು ಅವಕಾಶ ಮಾಡಿಕೊಟ್ಟಂತಹ ನಿರ್ದೇಶಕ ಎಸ್ ಎಸ್ ರಾಜಮೌಳಿ ಹಾಗೂ ನಟ ರಾಮ್ ಚರಣ್ ಗೆ ಎಷ್ಟು ಧನ್ಯವಾದಗಳು ಹೇಳಿದರೂ ಕಡಿಮೆಯೇ ಎಂದು ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಪ್ರಶಸ್ತಿಯು ಇದಾಗಿದ್ದು, ಇದರಲ್ಲಿ ಆರ್ ಆರ್ ಆರ್ ಸಿನಿಮಾವು ಎರಡು ವಿಭಾಗಗಳಲ್ಲಿ ನಾಮಿನೇಷನ್ ಆಗಿತ್ತು. ಅದರಲ್ಲಿ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಹಾಡಿನ ವಿಭಾಗದಲ್ಲಿ ಆಯ್ಕೆಯಾಯಿತು. ಈ ಸಿನಿಮಾವು ಇಂಗ್ಲೀಷ್ ಸಿನಿಮಾ ಕೆಟಗಿರಿಯಲ್ಲಿ ಸಹ ಸ್ಪರ್ಧೆ ಮಾಡಿತ್ತು ಎಂಬುದು ಗಮನಾರ್ಹ. ಆದರೆ, ಇದೇ ಮೊಟ್ಟ ಮೊದಲ ಬಾರಿಗೆ ಭಾರತದ ಸಿನಿಮಾ ಒಂದು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಇಡೀ ತಂಡ ಸಂಭ್ರಮದಲ್ಲಿ ತೇಲಾಡಿತು. ಇನ್ನು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮಾ, ಉಪಾಸನಾ ಸೀರೆ ಉಟ್ಟು ಕಾರ್ಯಕ್ರಮದಲ್ಲಿ ಮಿಂಚಿದ್ದರು. ಆ ಸಂಭ್ರಮದ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಸ್ಕರ್ ಮುಟ್ಟಲು ಕೊಡುವಿರಾ : ಆರ್ ಆರ್ ಆರ್ ಸಿನಿಮಾ ವು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡು ಇಂಡಿಯಾಗೆ ಬಂದಾಗ ಅದನ್ನು ಮುಟ್ಟಲುನನಗೆಅವಕಾಶ ಕೊಡು ಪ್ಲೀಸ್ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಮನವಿ ಮಾಡಿ ಟ್ವೀಟ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ರಾಮ್ ಚರಣ್ ಖಂಡಿತವಾಗಿಯೂ ಶಾರುಖ್ ಸರ್. ಈ ಪ್ರಶಸ್ತಿಯು ಭಾರತೀಯ ಚಿತ್ರರಂಗಕ್ಕೆ ಸೇರಿದ್ದು ಎಂದು ಮರು ಟ್ವೀಟ್ ಮಾಡಿದ್ದಾರೆ.

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಮಟ್ಟದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರುವ ಸಂಭ್ರಮವನ್ನು ನಟ ರಾಮ್ ಚರಣ್ ಹಾಗೂ ನಿರ್ದೇಶಕ ರಾಜಮೌಳಿ ಅವರು ಈ ಹಾಡಿನ ನೃತ್ಯವನ್ನು ಅನುಸರಿಸುವ ಮೂಲಕ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ನಾಟು ನಾಟು ಹಾಡಿಗೆ ಕುಣಿದು ಸಂಭ್ರಮಿಸಿದ್ದಾರೆ.




