ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೂರನೇ ODI ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಏಕದಿನ ಕ್ರಿಕೆಟ್‌ನ ತಮ್ಮ 46ನೇ ಶತಕ ಬಾರಿಸಿದ ಕಿಂಗ್ ಕೊಹ್ಲಿ, ಆ ಮೂಲಕ ಮತ್ತೊಂದು ಅವಿಸ್ಮರಣೀಯ ಇನ್ನಿಂಗ್ಸ್ ಆಡಿದರು.
ಲಂಕಾ ವಿರುದ್ಧ ಅಬ್ಬರದ ಶತಕ ಬಾರಿಸಿದ ‘ವಿರಾಟ್ ಕೊಹ್ಲಿಗೂ ಜನವರಿ 15ಕ್ಕೂ ಬಿಡಿಸಲಾಗದ ಲವ್ ಅಫೇರ್’ ಇದೆ. ಕಳೆದ ಹಲವು ವರ್ಷಗಳಿಂದ ಕಿಂಗ್ ಕೊಹ್ಲಿ ಪಾಲಿಗೆ ಜನವರಿ 15 ಅದೃಷ್ಟದ ದಿನವಾಗಿದೆ. ಇದು ಕಾಕತಾಳೀಯ ಎಂದರೂ ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಶತಕಗಳನ್ನ ಬಾರಿಸುವ ಜೊತೆಗೆ ಹಲವು ದಾಖಲೆಗಳನ್ನು ಬರೆದಿರುವ ಚೇಸ್ ಮಾಸ್ಟರ್, ಜನವರಿ 15ನೇ ತಾರೀಖಿನಂದೇ 4 ಅಂತಾರಾಷ್ಟ್ರೀಯ ಶತಕ ಬಾರಿಸಿರುವುದು ವಿಶೇಷ.

2017ರ ಜನವರಿ 15ರಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 122 ರನ್‌ಗಳಿಸಿ ಕೊಹ್ಲಿ ಮಿಂಚಿದ್ದರು. ಇದಾದ ನಂತರ 2018ರ ಜನವರಿ 15ರಂದು ಕೇಪ್ ಟೌನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 153 ರನ್‌ಗಳಿಸಿದ್ದರು. ಇನ್ನೂ 2019ರಲ್ಲಿ ಜನವರಿ 15ರಂದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅದ್ಬುತ ಶತದ ದಾಖಲಿಸಿ ಅಬ್ಬರಿಸಿದ್ದರು. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, 104 ರನ್ ಗಳಿಸಿದ್ದರು.

ಇದೀಗ 2023ರ ಆರಂಭದಲ್ಲೇ ಅತ್ಯುತ್ತಮ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿ, ಜನವರಿ 15ರಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಅಜೇಯ 166 ರನ್‌ಗಳಿಸಿದರು. ಕೇವಲ 85 ಎಸೆತಗಳಲ್ಲಿ ಶತಕ ಬಾರಿಸಿದ ಕೊಹ್ಲಿ, ODI ಕ್ರಿಕೆಟ್‌ನಲ್ಲಿ 46ನೇ ಸೆಂಚುರಿ ದಾಖಲಿಸಿದರು. ಇದು ಜನವರಿ 15ನೇ ತಾರೀಖಿನಂದು ಕೊಹ್ಲಿ ಬ್ಯಾಟ್ನಿಂದ ಬಂದ ನಾಲ್ಕನೇ ಅಂತಾರಾಷ್ಟ್ರೀಯ ಶತಕವಾಗಿದೆ.
ಇವಿಷ್ಟು ‘ವಿರಾಟ್ ಕೊಹ್ಲಿ ಹಾಗೂ ಜನವರಿ 15ರ’ ನಡುವಿನ ಸೆಂಚುರಿಗಳ ಕಥೆಯಾದರೆ. ಟೀಂ ಇಂಡಿಯಾದ ಯಶಸ್ವಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದು ಸಹ ಜನವರಿ 15ನೇ ತಾರೀಖಿನಂದೇ ಎಂಬುದು ಮತ್ತೊಂದು ಇಂಟ್ರೆಸ್ಟಿಂಗ್ ಅಂಶ.
#VIRAT KOHLI #SACHIN TENDULKAR #MAHELAJAYAVERDHANE #SRILANKA #CENTURY #HUNDRED RUNS #JANUARY 15TH #LUCKYDAY




