ನವದೆಹಲಿ: ಜ.19: ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಗುರುತಿಸಿಕೊಂಡಿದ್ದ ಚೀನಾ ದೇಶ ಸದ್ಯದ ಸ್ಥಿತಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ ಎಂದು ಕೆಲ ಅಂತಾರಾಷ್ಟ್ರೀಯ ಸಂಸ್ಥೆಗಳು ವಿಶ್ಲೇಷಣೆ ಮಾಡಿವೆ. ಸದ್ಯ ಡ್ರ್ಯಾಗನ್ ದೇಶವನ್ನ ಹಿಂದಿಕ್ಕಿ ಜನಸಂಖ್ಯೆಯಲ್ಲಿ ಭಾರತ ನಂಬರ್ ಒನ್ ದೇಶವಾಗಿ ಗುರುತಿಸಿಕೊಂಡಿದೆ. ಈ ಎಲ್ಲಾ ಘಟನೆಗಳ ನಡುವೆ ಚೀನಾದಲ್ಲಿ ಜನನ ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.


ಪ್ರಸ್ತುತ ಭಾರತ ಮತ್ತು ಚೀನಾ ದೇಶಗಳ ಜನಸಂಖ್ಯೆ ಎಷ್ಟಿದೆ ಎಂದು ನೋಡೋದಾದ್ರೆ
ಜನಸಂಖ್ಯೆಯಲ್ಲಿ ಚೀನಾದೇಶವನ್ನ ಹಿಂದಿಕ್ಕಿದ ಭಾರತ : ವರ್ಲ್ಡ್ ಪಾಪುಲೇಶನ್ ಸಮೀಕ್ಷೆ ಪ್ರಕಾರ 2022ನೇ ಸಾಲಿನ ಅಂತ್ಯದ ವೇಳೆ ಭಾರತದ ಜನಸಂಖ್ಯೆ 141.7 ಕೋಟಿ ಇತ್ತು ಎನ್ನಲಾಗುತ್ತಿದೆ. ಈ ಸಂಖ್ಯೆ 2023 ಜನವರಿ 18ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆ 142.3 ಕೋಟಿ ಗಡಿ ದಾಟಿದೆ. ಇನ್ನು ಚೀನಾ ದೇಶದ ಒಟ್ಟು ಜನಸಂಖ್ಯೆ 141.2 ಕೋಟಿ ಇದೆ. ಹೀಗಾಗಿ ಭಾರತ ದೇಶವೇ ನಂಬರ್ ಒನ್ ದೇಶವಾಗಿದೆ. ಜನನ ಪ್ರಮಾಣ ಕಡಿಮೆ ಆಗುತ್ತಿರುವುದು ಮತ್ತು ವಯೋ ವೃದ್ಧರ ಸಂಖ್ಯೆ ಏರಿಕೆ ಕಾರಣದಿಂದ ನಮ್ಮದೇಶದಲ್ಲಿ ಕಳೆದ 60 ವರ್ಷಗಳಲ್ಲೇ ಜನಸಂಖ್ಯೆ ಏರಿಕೆ ಕಡಿಮೆ ಆಗಿದೆ ಎಂದು ಚೀನಾ ಪ್ರಕಟಿಸಿದೆ.


2021 ಮತ್ತು 2022ನೇ ಸಾಲಿನಲ್ಲಿ ನಮ್ಮ ದೇಶದ 8.50 ಲಕ್ಷ ದಷ್ಟು ಜನಸಂಖ್ಯೆ ಕಡಿಮೆ ಆಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಯಾಟಿಸ್ಟಿಕ್ಟ್ ತಿಳಿಸಿದೆ. ಪ್ರಸ್ತುತವಾಗಿ ಚೀನಾ ದೇಶ ಒಟ್ಟು ಜನಸಂಖ್ಯೆ 141.18 ಕೋಟಿ ಇದೆ.
ವಿಶ್ವಸಂಸ್ಥೆಯ ಅಂದಾಜು ಉಲ್ಟಾ..!

2023ರ ವೇಳೆಗೆ ಜನಸಂಖ್ಯೆ ಏರಿಕೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿತ್ತು. ಆದರೆ ಅದಕ್ಕೂ ಮೊದಲೆ ಭಾರತ ದೇಶವು ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಗುರುತಿಸಿಕೊಂಡಿದೆ. ಇನ್ನು 2050ರ ವೇಳೆಗೆ ಭಾರತದ ಜನಸಂಖ್ಯೆ 167 ಕೋಟಿ ಗಡಿ ದಾಟಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಅದರ ಜೊತೆಗೆ ಚೀನಾ ದೇಶದ ಜನಸಂಖ್ಯೆ 137.7 ಕೋಟಿಗೆ ಕುಸಿಯಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಈ ನಡುವೇ 2022ರ ನವೆಂಬರ್ ವೇಳೆಗೆ ಪ್ರಪಂಚದ ಒಟ್ಟು ಜನಸಂಖ್ಯೆ 800 ಕೋಟಿ ದಾಟಿದೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ. 1974ರಲ್ಲಿ 400 ಕೋಟಿ ಇದ್ದ ಪ್ರಪಂಚದ ಒಟ್ಟು ಜನಸಂಖ್ಯೆ, ಕೇವಲ 48 ವರ್ಷಗಳಲ್ಲೇ ಎರಡರಷ್ಟು ಅಂದ್ರೆ 800 ಕೋಟಿ ಜನಸಂಖ್ಯೆ ಹೆಚ್ಚಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಮತ್ತು ಜನನ ಮರಣ ಪ್ರಮಾಣ ಕಡಿಮೆ ಸೇರಿದಂತೆ ಹಲವು ಕಾರಣಗಳಿಂದ ಜನಸಂಖ್ಯೆ ಏರಿಕೆ ಆಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.




