Pentagon Movie Teaser : ಪೆಂಟಗನ್ ಸಿನಿಮಾ ಟೀಸರ್ ಗೂ ವಿರೋಧ : ಸಿನಿಮಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗ್ತಿದ್ಯಾ ಧಕ್ಕೆ..?

ಬೆಂಗಳೂರು :ಜ.20; ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಸಂಗತಿಗಳನ್ನು ಐಲೆಟ್ ಮಾಡಿಕೊಂಡು ವಿರೋಧ ವ್ಯಕ್ತಪಡಿಸುವ ಪದ್ಧತಿ ಬೆಳೆಯುತ್ತಿದೆ. ಇತ್ತೀಚೆಗೆ ಪಠಾಣ್ ಸಿನಿಮಾದಲ್ಲಿ ಬೇಷರಮ್ ಹಾಡಿನ ಪದ ಬಳಕೆ ಮತ್ತು ದೀಪಿಕಾ ನಟನೆಯಲ್ಲಿ ಧರಿಸಿದ್ದ ಕೇಸರಿ ಬಿಕಿನಿ ಕುರಿತು ವಿವಾದ ಸೃಷ್ಟಿಯಾಗಿತ್ತು..! ಅದಾದ ಮೇಲೆ ಅಮೀರ್ ಖಾನ್ ಸೇರಿದಂತೆ ಅನೇಕ ನಟ, ನಟಿಯರು ಅಭಿನಯಿಸಿದ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲವೊಂದು ಮಾತುಗಳನ್ನು ವಿರೋಧಿಸಿ ಅದನ್ನು ತೆಗೆಯಬೇಕು, ಕೈ ಬಿಡಬೇಕೆಂಬ ಒತ್ತಡಗಳು ಸಹ ಅಧಿಕವಾಗಿವೆ. ಎರಡು ದಿನಗಳ ಹಿಂದೆ ಅಷ್ಟೇ ಟೀಸರ್ ಬಿಡುಗಡೆ ಆಗಿರುವ ಪೆಂಟಗನ್ ಸಿನಿಮಾದಲ್ಲಿ ಆಕ್ಷೇಪಾರ್ಹ ಮಾತು ಕೈ ಬಿಡಬೇಕೆಂದು ಒತ್ತಡಗಳು ಕೇಳಿ ಬಂದಿವೆ. ಇದೇ ಪದ್ಧತಿ ಮುಂದುವರಿದರೆ ಸಿನಿಮಾ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಧಕ್ಕೆಯಾಗುವುದು ಗ್ಯಾರಂಟಿ ಎಂಬ ಮಾತುಗಳು ಸಿನಿಮಾ ವಲಯದಿಂದ ಕೇಳಿ ಬರುತ್ತಿವೆ.

ನಟ ಕಿಶೋರ್ ನಾಯಕ ನಟರಾಗಿ ನಟಿಸಿರುವ ಪೆಂಟಗನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಅದರಲ್ಲಿ ಕನ್ನಡಪರ ಹೋರಾಟಗಾರರನ್ನು ರೋಲ್‌ಕಾಲ್ ಎಂದು ಸಂಬೋಧಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕವು ಟೀಸರ್ ನಿಂದ ಆಕ್ಷೇಪಾರ್ಹ ಹೇಳಿಕೆಯನ್ನು ತೆಗೆಯಬೇಕು ಅಂತ ಒತ್ತಾಯಿಸಿದೆ.ಈ ಸಂಬಂಧ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ಟೀಸರ್ ನಲ್ಲಿ ಬಳಕೆ ಮಾಡಿರುವ ರೋಲ್ ಕಾಲ್ ಪದವನ್ನು ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ನಿರ್ದೇಶಕ ಗುರು ದೇಶಪಾಂಡೆ ಕಚೇರಿ ಮುಂದೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿರುವ ಟೀಸರ್ ಕುರಿತು ಈಗಲೇ ಆಕ್ಷೇಪಗಳು ಹೊರ ಹೊಮ್ಮಿವೆ.
ಸಿನಿಮಾದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಆದ ರೂಪೇಶ್ ರಾಜಣ್ಣ ವೇದಿಕೆಯಲ್ಲಿಯೇ ರೋಲ್‌ಕಾಲ್ ಪದ ಬಳಕೆಯ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಕನ್ನಡ ರಕ್ಷಣಾ ವೇದಿಕೆಯ ಅಶ್ವಿನಿ ಗೌಡ ಸಹ ಬೆಂಬಲ ಸೂಚಿಸಿದ್ದರಿಂದ ಇಬ್ಬರೂ ಒಟ್ಟಾಗಿ ಇದನ್ನು ವಿರೋಧಿಸಿದರು. ಈ ಸಮಯದಲ್ಲಿ ನಿರ್ದೇಶಕ ಎಷ್ಟೇ ಸಮಾಧಾನ ಮಾಡಿದರು ಸಹ ಅದಕ್ಕೆ ಇವರಿಬ್ಬರೂ ಕೂಲ್ ಆಗಲಿಲ್ಲ. ಕೊನೆಗೆ ಅವರೇ ಉತ್ತರವನ್ನು ಕೊಟ್ಟಿದ್ದರು.


ಸಿನಿಮಾದ ಕೆಲವು ಭಾಗಗಳನ್ನು ಆಯ್ಕೆ ಮಾಡಿ, ಅದನ್ನು ಟೀಸರ್ ಆಗಿ ಮಾಡಲಾಗುತ್ತದೆ. ಸಿನಿಮಾ ಬಿಡುಗಡೆ ಆದ ಮೇಲೆ ಅದನ್ನು ನೋಡಿ ನಂತರ ತೀರ್ಮಾನ ಮಾಡಿ. ಟೀಸರ್ ಅಂತಿಮವಲ್ಲ, ಇದರಲ್ಲಿ ಏನು ಮಾತನಾಡಿದ್ದೆವೋ ಅದಕ್ಕೆ ಸಿನಿಮಾದಲ್ಲಿ ಉತ್ತರ ಸಿಗಲಿದೆ. ಆಮೇಲೆಯೂ ನಿಮಗೆ ಅಸಮಾಧಾನ ಇದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ‌ನಿರ್ದೇಶಕ ಸಮಾಧಾನ ಮಾಡಿದ್ದಾರೆ.

ಸಿನಿಮಾವು ಕನ್ನಡಪರ ಹೋರಾಟಗಾರರನ್ನು ಕುರಿತಾದ್ದರಿಂದ ಇದರಲ್ಲಿ ಕನ್ನಡಪರ ಸಂಘಟನೆಗಳ ನಾಯಕರುಗಳ ಹೆಸರು ಸಹ ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಇದರಲ್ಲಿ ರೋಲ್ ಕಾಲ್, ರೌಡಿ, ಮಾಜಿ ಭೂಗತ ದೊರೆ ಹೀಗೆ ಅನೇಕ ಪಾತ್ರಗಳನ್ನು ಇಡಲಾಗಿದೆ. ಅದು ಎಲ್ಲವೂ ಟೀಸರ್ ನಲ್ಲಿ ಇರುವುದರಿಂದ ಕನ್ನಡ ಪರ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಸಿನಿಮಾದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನಿರ್ದೇಶಕರು ಕಣ್ಣಿಗೆ ಕಾಣುವ ಹಾಗೇ ಕಟ್ಟಿಕೊಟ್ಟುದ್ದಾರೆ ಎನ್ನಲಾಗಿದೆ. ರಜನಿಕಾಂತ್ ಸಿನಿಮಾ ಬಿಡುಗಡೆ ಮಾಡದಂತೆ ಮಾಡಿದ ಹೋರಾಟವನ್ನೂ ಸೇರಿಸಲಾಗಿದ್ಯಂತೆ. ಹೀಗಾಗಿ ಒಂದಷ್ಟು ಹೋರಾಟಗಳನ್ನು ಈ ಟೀಸರ್ ನೆನಪಿಸುತ್ತದೆ. ಆದ್ದರಿಂದ ಇದನ್ನು ವಿರೋಧಿಸುತ್ತಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಪೆಂಟಗಾನ್.. ಕನ್ನಡಪರ ಹೋರಾಟಗಾರನ ಜೀವನ ಕಥೆಯನ್ನು ಹೇಳುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಹಾಗೂ ಸಕಾರಾತ್ಮಕ ಸಂಗತಿಗಳು ಇರುತ್ತದೆ. ಅವರ ಜೀವನವನ್ನು ಹೇಳುವ ವೇಳೆ ಕೆಲವೊಂದನ್ನು ಹೇಳಲೇಬೇಕಿರುತ್ತದೆ. ಅದನ್ನು ಈ ಸಿನಿಮಾದಲ್ಲಿ ಹಿಡಿದಿಡಲಾಗಿದೆ. ಕನ್ನಡಪರ ಹೋರಾಟಗಾರರ ಅನುಮಾನವು ಸಿನಿಮಾ ಬಿಡುಗಡೆ ಆದ ಮೇಲೆ ಕಾಣಸಿಗುತ್ತವೆ ಎಂದು ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.

More News