ಬೆಳಗಾವಿ; ಜ.21: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ ನಡೆಸೋ ಮೂಲಕ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಸಮಾವೇಶದಲ್ಲಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ. ಈ ವೇಳೆ ಕುಕ್ಕರ್ ಅಲ್ಲ ಮಿಕ್ಸರ್ ಅಂತಾ ಜನರು ಹೇಳಿದ್ರು ಇದಕ್ಕೆ ಪ್ರತಿಕ್ರಿಯೆ ಕೊಟ್ಟ ರಮೇಶ್ ಜಾರಕಿಹೊಳಿ ಎಲ್ಲಾ ಒಂದೇ ಬಿಡಿ ಅಂತಾ ಹೇಳಿದರು. ಒಂದು ಡಬ್ಬಿ ಕೊಟ್ಟಿದ್ದು ಅದು 70 ರಿಂದ 80 ರೂ. ಇರಬಹುದು. ಮಿಕ್ಸರ್ ಒಂದು ಆರು ಏಳೂ ನೂರು ರೂಪಾಯಿ ಇರಬಹುದು. ಇನ್ನೊಂದು ಐಟಂ ಏನಾದರೂ ಕೊಡಬಹುದು ಅವರು ಎಲ್ಲಾ ಸೇರಿ ಮೂರು ಸಾವಿರ. ನಾವು ಆರು ಸಾವಿರ ಕೊಟ್ಟರೇ ವೋಟ್ ಹಾಕಿ ಅಂತಾ ಹೇಳಿದರು.

ನಾನು ಆರು ಚುನಾವಣೆ ಗೆದ್ದಿದ್ದೇನೆ ಆದ್ರೆ ಯಾವಾಗಲೂ ರೊಕ್ಕ ಕೊಟ್ಟಿಲ್ಕ. ಉಲ್ಟಾ ನನಗೆ ದುಡ್ಡು ಕೊಟ್ಟು ನಮ್ಮ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ಎಂತಹ ದುರ್ದೈವ ಬಂತು ಗ್ರಾಮೀಣ ಕ್ಷೇತ್ರದಲ್ಲಿ ನಾವೇ ತಂದುವ ಅದನ್ನ. ಸಮಾಜಕ್ಕೆ ಕೆಟ್ಟ ಹುಳ ಅದು, ಅದನ್ನ ಹೇಗಾದರೂ ಮಾಡಿ ತೆಗೆಯಬೇಕು ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕೆಟ್ಟ ಹುಳ ಎಂದ ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದರು.

ಈ ಕ್ಷೇತ್ರದಲ್ಲಿ ಮಾಳಗಿ, ಕಿಣೇಕರ್, ಸಂಜಯ್ ಪಾಟೀಲ್ ಎಂಎಲ್‌ಎ ಆಗಿದ್ದರು. ಈ ಶಾಸಕರು ಆದ ಬಳಿಕ ಈ ರಸ್ತೆಯಲ್ಲಿ ಎಷ್ಟು ಬಾರ್, ಕ್ಲಬ್‌ಗಳು ಆದವು. ಅವರ ಚಮಚಾಗಳು ಏನೇನು ಮಾಡಿದ್ದಾರೆ. ಎಷ್ಟು ಬೇಕಾದ್ ಆಗಲಿ ಈ ಬಾರಿ ಚುನಾವಣೆ ಗೆಲ್ಲಲೇಬೇಕು ಅನ್ನೋ ಮೂಲಕ ಮತದಾರರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಬೇಕೆಂದು ಕರೆ ನೀಡಿದರು. ಒಂದು ವೇಳೆ ಅಷ್ಟು ಮೀರಿ ಜನ ವೋಟ್ ಹಾಕಿದ್ರೆ ಏನು ಮಾಡೋಕಾಗಲ್ಲ. ಈಗಿನ ಶಾಸಕರ ಕಳೆದ ಐದು ವರ್ಷಗಳ ಹಿಂದಿನ ವಿಡಿಯೋ ನೋಡಿ. ಈಗಿನ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ, ಎಲ್ಲಾ ನಿಮ್ಮ ದುಡ್ಡು. ಹಿಂದೆ ಇನೋವಾ ಕಾರು ನೋಡಿ, ಈಗಿನ ಕಾರು ನೋಡಿ. ಅವರೆಷ್ಟು ಖರ್ಚು ಮಾಡ್ತಾರೆ ಅದಕ್ಕಿಂತ ಹತ್ತು ಕೋಟಿ ಹೆಚ್ಚು ಖರ್ಚು ಮಾಡೋಣ. ಮೊನ್ನೆ ಎಂಎಲ್‌ಸಿ ಚುನಾವಣೆಯಲ್ಲಿ ಸಾಲ ಮಾಡಿ ಖರ್ಚು ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಈ ವೇಳೆ ಡಿಕೆಶಿ ಫಂಡ್ ಅಂತಾ ಹೇಳಿದ ಓರ್ವ ಬೆಂಬಲಿಗ ಈ ಮಾತಿಗೆ ಮರು ಮಾತನಾಡಿದ ರಮೇಶ್ ಜಾರಕಿಹೊಳಿ ಅವನು ಕೊಡೋದಿಲ್ಲ, ಕಸಿದುಕೊಳ್ತಾನ ಅಂವ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ನಾನು ಮಾಜಿ ಆದ ಮೇಲೆ ಅವರಿಗೆ ಸೊಕ್ಕು ಬಂತು. ಮನೆ ಹಿಡಿಯುವ ಮನುಷ್ಯ ನಾನಾಗಲಿ ಅಥವಾ ಜಾರಕಿಹೊಳಿ ಕುಟುಂಬ ಅಲ್ಲ.

ಕಳೆದ ಮೂವತ್ತು ವರ್ಷಗಳಿಂದ ಜಾರಕಿಹೊಳಿ ಕುಟುಂಬದಲ್ಲಿ ಎಷ್ಟೋ ಷಡ್ಯಂತ್ರ ಆಗಿವೆ. ಈ ಕಾರ್ಯಕ್ರಮ ಬಿಜೆಪಿ ಹೆಸರಿನ ಮೇಲೆ ಕಾರ್ಯಕ್ರಮ ಮಾಡಿಲ್ಲ. ಏಕೆಂದರೆ ಈ ಕಾರ್ಯಕ್ರಮದಲ್ಲಿ 70 ಪರ್ಸೇಂಟ್ ಬೇರೆ ಪಕ್ಷದವರು ಬರ್ತಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಂಟು ಜಿ.ಪಂ.ಕ್ಷೇತ್ರದಲ್ಲಿ 3 ಎಂಇಎಸ್ 4 ಕಾಂಗ್ರೆಸ್ ಇದೆ. ಎಂಇಎಸ್‌ನವರನ್ನು ನಾವ್ಯಾರು ಇಲ್ಲಿ ಕರೆದಿಲ್ಲ. ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಅವರ ಪರ ಕೆಲಸ ಮಾಡ್ತೇವೆ. ಹಿಂದೆ ಚುನಾವಣೆಯಲ್ಲಿ ಈಗಿನ ಶಾಸಕರ ಪರ ಇಲ್ಲಿರುವ 70 ಪರ್ಸೆಂಟ್ ಜನ ಇದ್ದರು. ಒಂದು ಒಳ್ಳೆಯ ಮನೆತನ ಒಳ್ಳೆಯ ಹೆಣ್ಣು ಮಗಳು ಅಂತಾ ಮಾಡಿದ್ವಿ. ಈಗ ನಮಗೆ ಗುರ್ರ ಅಂತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿ ಕಾರಿದರು. ಮೊನ್ನೆ ಎಂಎಲ್‌ಸಿ ಚುನಾವಣೆ ವೇಳೆ ನಮ್ಮ ಪಕ್ಷದವರ ಸ್ವಯಂಕೃತ ಅಪರಾಧದಿಂದ ಸೋತ್ವಿ. ಉದ್ದ ಅಂಗಿ ಹಾಕಿಕೊಂಡು ಬಂದ ನಮ್ಮ ನಾಯಕರಿಂದ ಪಕ್ಷಕ್ಕೆ ಧೋಖಾ ಆಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಓಡಾಟ ಮಾಡ್ತೀನಿ. ನಾನು ಮಂತ್ರಿ ಸ್ಥಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಂತ್ರಿ ಕೊಡಲಿ ಬಿಡಲಿ ಕೆಲಸ ಮಾಡ್ತೀನಿ. ಈಗ ಬೆಳಗಾವಿ ಜಿಲ್ಲೆಯಲ್ಲಿ 13 ಸೀಟ್ ಅದಾವ್ ಮುಂದೆ 14 ಸೀಟ್ ಮಾಡೋಣ. ಎಂದು ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಹೇಳಿದರು.




