ಬೆಂಗಳೂರು :ಜ.21: ರಿಯಲ್ ಮುಖ್ಯಮಂತ್ರಿ.. ರಿಯಲ್ ಮಿನಿಸ್ಟರ್ ರೀಲ್ ನಲ್ಲೂ ಅದೇ ಪಾತ್ರ ನಿಭಾಯಿಸಿದ್ರೆ ಹೇಗಿರುತ್ತೆ ಎಂಬ ಪ್ರಶ್ನೆಗೆ ತನುಜ ಸಿನಿಮಾ ತಂಡ ಉತ್ತರ ಕೊಟ್ಟಿದೆ.. ಗ್ರಾಮೀಣ ಭಾಗದ ಬಡ ಕುಟುಂಬದ ಮಗಳೊಬ್ಬಳ ಕಥೆ ಕಟ್ಟೋಕೆ ಮಾಜಿ ಸಿಎಂ, ಹಾಲಿ ಸಚಿವರು ಬಣ್ಣ ಹಚ್ಚಿದ್ದಾರೆ.
ಹರೀಶ್ ಎಂ ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ನೈಜ ಘಟನೆ ಆಧಾರಿತ ಚಿತ್ರ ‘ತನುಜ’. ಕೋವಿಡ್ ಸಮಯದಲ್ಲಿ ಗ್ರಾಮೀಣ ಭಾಗದ ಹೆಣ್ಣುಮಗಳು ನೀಟ್ ಎಕ್ಸಾಮ್ ಬರೆಯಲು ಪಟ್ಟ ಸಾಹಸಗಾಥೆಯನ್ನು ಈ ಚಿತ್ರ ಒಳಗೊಂಡಿದೆ. ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಆಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಈ ಚಿತ್ರದಲ್ಲಿ ನಟಿಸಿರೋದು ವಿಶೇಷ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತನುಜ ಚಿತ್ರೀಕರಣದಲ್ಲಿ ಭಾಗಿಯಾದ ವೀಡಿಯೋ ವೈರಲ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ.
ಹರೀಶ್ ಈ ಹಿಂದೆ ಅಂತರ್ಜಲ ಸಿನಿಮಾ ಮೂಲಕ ಗಮನ ಸೆಳೆದು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ರು. ಇದೀಗ ಕೋವಿಡ್ ಸಮಯದಲ್ಲಿ ನಡೆದ ನೈಜ ಘಟನೆಯನ್ನು ಸಿನಿಮಾ ರೂಪಕ್ಕೆ ಇಳಿಸಿ ತನುಜ ಸಿನಿಮಾ ಮೂಲಕ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದ ರೋಚಕ ಕಥೆಯನ್ನು ಹೇಳಹೊರಟಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಹರೀಶ್, ಸಿನಿಮಾ ಮುಗಿಸಲು ಸಾಕಷ್ಟು ಅಡೆತಡೆ ಎದುರಿಸಿದ್ವಿ. ವಿದ್ಯಾರ್ಥಿ ಮನಸ್ಸು ಮಾಡಿದ್ರೆ ಏನು ಬೇಕಾದ್ರು ಸಾಧಿಸಬಹುದು. ತನುಜ ಗ್ರಾಮೀಣ ಭಾಗದ ಬಡ ಕುಟುಂಬದ ಮಗಳೊಬ್ಬಳ ಕಥೆ. ಐದು ದೇಶದಲ್ಲಿ ತನುಜ ಪ್ರೀಮಿಯರ್ ಶೋ ನಡೆಸಲಿದ್ದೇವೆ. ತನುಜ ಪರೀಕ್ಷೆ ಬರೆದ ರೋಚಕ ಘಳಿಗೆ ಪ್ರತಿ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡಲಿದೆ. ಮಗಳ ಕಥೆ ಸಿನಿಮಾ ಮಾಡ್ತೀವಿ ಅಂದಾಗ ಅವರ ತಾಯಿ ನಗ್ತಾ ಇದ್ರು. ನಿನ್ನ ಸಿನಿಮಾ ಹಾಡು ಬರೆಯಲು ಹದಿನೈದು ದಿನ ಬೇಕಾಯಿತು ಎಂದು ಜಯಂತ್ ಕಾಯ್ಕಿಣಿ ಸರ್ ಹೇಳಿದ್ರು. ಕೋವಿಡ್ ಸಂದರ್ಭದಲ್ಲಿ ನಡೆದ ನೈಜ ಘಟನೆ ತನುಜ. ಈ ಚಿತ್ರದಲ್ಲಿ ಯಡಿಯೂರಪ್ಪ, ಸುಧಾಕರ್, ವಿಶ್ವೇಶ್ವರ ಭಟ್ ಸರ್ ನಟಿಸಿದ್ದಾರೆ. ಯಡಿಯೂರಪ್ಪ ಸರ್ ಶೂಟಿಂಗ್ ಸೆಟ್ ಗೆ ಬಂದಾಗ ನಮಗೆ ಶಾಕ್ ಆಯ್ತು.. ಸುಧಾಕರ್ ಸರ್ ಅದ್ಭುತವಾಗಿ ನಟಿಸಿದ್ದಾರೆ. ವಿಶ್ವೇಶ್ವರ ಭಟ್ ಸರ್ ಮೂರು ದಿನ ತನುಜ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಈ ತನುಜಾ ಸಿನಿಮಾ ಫೆಬ್ರವರಿ 3 ಕ್ಕೆ ರಾಜ್ಯಾದ್ಯಂತ ತೆರೆಯ ಮೇಲೆ ಬರಲಿದ್ದು, ಯಡಿಯೂರಪ್ಪ ಅವರನ್ನು ಮೊದಲ ಬಾರಿಗೆ ತೆರೆಯ ಮೇಲೆ ನೋಡುವ ಅವಕಾಶ ಸಿಗಲಿದೆ.




