ಕಲಬುರಗಿ: ಜ.24: ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಈ ಬಾರಿ ಬೆಂಗಳೂರಿನಲ್ಲಿ ಫೆಬ್ರವರಿ 13ರಿಂದ ಆರಂಭಗೊಳ್ಳಲಿದೆ. ಈ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆಯಲ್ಲಿರುವ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

“ಫೆಬ್ರವರಿ 13ರಿಂದ ಪ್ರಾರಂಭವಾಗುವ ಏರೋ ಇಂಡಿಯಾ ಪ್ರದರ್ಶನವು ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು,1996 ರಿಂದ ಬೆಂಗಳೂರಿನ ಏರ್ ಫೋರ್ಸ್ ನಿಲ್ದಾಣದಲ್ಲಿ ನಿರಂತರವಾಗಿ ಕರ್ನಾಟಕ ಆತಿಥ್ಯ ವಹಿಸಿದೆ. ಈ ಬಾರಿ ಅತಿ ದೊಡ್ಡ ಏರ್ ಶೋ ನಡೆಯಲಿದ್ದು, ಅತಿ ಹೆಚ್ವು ಜನ ಭಾಗವಹಿಸುತ್ತಿದ್ದಾರೆ. ಗಣ್ಯರು, ಏರೋಸ್ಪೇಸ್ ಮುಖ್ಯಸ್ಥರು, ಕಂಪನಿಗಳ ಸಿಇಒಗಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಇರುವ ಏರೋಸ್ಪೇಸ್ ಕಂಪನಿಗಳ ವಸ್ತು ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಕೂಡ ಏರ್ ಶೋ ಕಣ್ತುಂಬಿಕೊಳ್ಳಬಹುದು. ಈ ವೈಮಾನಿಕ ಪ್ರದರ್ಶನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಏರ್ ಶೋನ ಪೂರ್ವಭಾವಿ ಸಿದ್ಧತೆಗಳ ವೀಡಿಯೋ ಸಂವಾದ ನಡೆಯಿತುʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಏಷ್ಯಾದ ಅತಿದೊಡ್ಡ ಏರ್ ಶೋ ‘ಏರೋ ಇಂಡಿಯಾ- 2023’ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಏರ್ ಶೋಗೆ ಆತಿಥ್ಯ ವಹಿಸಿರುವ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯೂ ನಡೆಯಲಿದೆ ಎಂದು ರಕ್ಷಣಾ ಉತ್ಪಾದನಾ ಸಂಸ್ಥೆ ಹೇಳಿದೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಇದಾಗಿದ್ದು, ಏರ್ ಶೋ ಪ್ರದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗಳಿಕೆಗಳಲ್ಲೊಂದಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ ‘ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಸೇಷನ್’ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಹಲವು ದೇಶ, ವಿದೇಶಗಳ ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಲಿವೆ. 2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ವೇಳೆ ಸಂಭವಿಸಿದ ಅಗ್ನಿ ಅವಗಢದಲ್ಲಿ ಕಾರುಗಳು ಬೆಂಕಿಗಾಹುತಿಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ವಿಮಾ ಕಂಪನಿಗಳು ಪರಿಹಾರ ವಿತರಣೆ ಮಾಡಿದ್ದವು.
ಬೆಂಗಳೂರಿನಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಮೊದಲ ಬ್ಯಾಚ್ ವಿಮಾನಗಳು ಫೆಬ್ರವರಿ 7ಕ್ಕೆ ಆಗಮಿಸಲಿದೆ. ಉಳಿದ ವಿಮಾನಗಳು ಫೆಬ್ರವರಿ 8-12ರ ನಡುವೆ ಆಗಮಿಸಲಿವೆ. ದರ್ಶನದಲ್ಲಿ ಭಾಗಿಯಾಗುವ ವಿಮಾನಗಳು ಫೆ.8 ರಿಂದ ಪೂರ್ವಾಭ್ಯಾಸ ನಡೆಸಲಿವೆ. ಫೆ.11ಕ್ಕೆ ಅಂತಿಮ ಹಂತದ ಪೂರ್ವಾಭ್ಯಾಸ ನಡೆಯಲಿದೆ.




