ಬೆಂಗಳೂರು :ಜ.24: 90ರ ದಶಕದಲ್ಲಿ ಇಡೀ ಕನ್ನಡ ಚಿತ್ರರಂಗವನ್ನೇ ಆಳಿದ ಕೊಡಗಿನ ಕುವರಿ.. ಚೆಲುವೆ ಪ್ರೇಮ ವಿವಾಹ ಸುದ್ದಿ ಸದ್ದು ಮಾಡುತ್ತಿದೆ. ಉಡುಪಿಯ ಕಾಪುವಿನಲ್ಲಿರುವ ಕೊರಗಜ್ಜ
ಬಳಿ ಎರಡನೇ ಮದ್ವೆ ಬಗ್ಗೆ ನಟಿ ಪ್ರಸ್ತಾಪಿಸಿದ್ದಾರೆ. ಬೇಗ ಮದುವೆ ಮಾಡುವಂತೆ ಕೋರಿದ್ದಾರೆ ಪ್ರೇಮ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ಗರಂ ಆದ ನಟಿ ಮದುವೆ ಆಗೋ ಸಮಯ ಬಂದಾಗ ನಾನೇ ಬಂದು ಹೇಳ್ತೀನಿ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ನಟಿ ಪ್ರೇಮ, ಅಂದು ನಾನು ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಗೆಳತಿಯ ಮದುವೆ ಇದ್ದ ಕಾರಣದಿಂದ. ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುವುದು ಬೇಡ. ನಾನು ಎಲ್ಲಿಯೂ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಗರಂ ಆದರು.

ಎರಡನೇ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ ನಟಿ ಪ್ರೇಮ, ನಾನು ಈಗಲೇ ಮದುವೆಯಾಗುವುದಿಲ್ಲ. ಜೀವನದಲ್ಲಿ ದೊಡ್ಡ ಸಾಧನೆ ಮಾಡುವುದು ಸಾಕಷ್ಟಿದೆ. ಮದುವೆಯಾಗಲು ಕಂಕಣ ಭಾಗ್ಯ ಕೂಡಿ ಬರಬೇಕು, ಆ ಸಮಯ ಬಂದಾಗ ನಾನೇ ತಿಳಿಸುತ್ತೇನೆ, ನಾನು ಓಡಿಹೋಗಿ ಮದುವೆಯಾಗಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ನಾನು ಮದುವೆ ಕುರಿತಾಗಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಅದು ಮಹಿಳೆಯ ವೈಯಕ್ತಿಕ ವಿಚಾರ, ಇಂಡಸ್ಟ್ರಿಯಲ್ಲಿ ನಾನು ಗಟ್ಟಿಯಾಗಿ ನಿಲ್ಲಬೇಕೆಂದರೆ ಹಲವಾರು ಅಡೆತಡೆಗಳು ಬಂದವು. ಆದರೆ ಅದ್ಯಾವುದಕ್ಕೂ ನಾನು ಜಗ್ಗಲಿಲ್ಲ ಎಂದರು.

ಸಿನಿಮಾ ಸಕ್ಸಸ್ ಪೀಕ್ ನಲ್ಲಿದ್ದಾಗಲೇ ಪ್ರೇಮ ವಿವಾಹವಾಗೋ ನಿರ್ಧಾರ ಮಾಡಿದ್ದರು. 2006ರಲ್ಲಿ ಕೊಡಗಿನ ಜೀವನ್ ಅಪ್ಪಚ್ಚು ಎಂಬುವರನ್ನ ವಿವಾಹವಾಗಿದ್ದ ನಟಿ ಪ್ರೇಮ, ಅಷ್ಟೇ ಬೇಗ ವಿಚ್ಚೇದನ ಪಡೆದುಕೊಂಡಿದ್ದರು. ಹೀಗಾಗಿ ಪ್ರೇಮ ಮತ್ತೆ ವಿವಾಹ ವಾಗಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.




