ಬೆಂಗಳೂರು :ಜ.25: ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯ ನೇರಳೆ ಮಾರ್ಗದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ರೈಲುಗಳ ಸಂಚಾರ ವ್ಯತ್ಯಯವಾಗಲಿದೆ. ಈ ಮಾರ್ಗದ ವಿಸ್ತರಣೆ ಕಾರ್ಯ ಪ್ರಾರಂಭಿಸುತ್ತಿರುವ ಕಾರಣ ಈ ಅಡಚಣೆ ಉಂಟಾಗಲಿದೆ. ಇದು ಬಹುತೇಕ ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

ಮೆಟ್ರೋ ಸಂಚಾರ ಸೌಲಭ್ಯ ಸೇವೆಯು ಸಾಮಾನ್ಯವಾಗಿ ಪ್ರತಿದಿನ ಮುಂಜಾನೆ 5 ರಿಂದ ರಾತ್ರಿ 11 ರವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮೆಟ್ರೋ ರೈಲು ಸಂಚಾರವಿರುತ್ತದೆ. ಆದರೆ, ಮೇಲೆ ಹೇಳಿದ ನಾಲ್ಕು ದಿನಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಲಿದೆ.

ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣದ ನಡುವೆ ಶುಕ್ರವಾರದಿಂದ ಸೋಮವಾರದವರೆಗೆ ಮೆಟ್ರೋ ರೈಲುಗಳು ಓಡುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಾಧ್ಯಮಗಳಿಗೆ ತಿಳಿಸಿದ್ದು, ಅಧಿಕಾರಿಗಳು ಕೆಂಗೇರಿಯಿಂದ ಆಚೆ ಚಲ್ಲಘಟ್ಟದವರೆಗೆ ಮಾರ್ಗವನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸುತ್ತಿರುವುದಾಗಿ ಹೇಳಿದ್ದಾರೆ.
ಈ ಅವಧಿಯಲ್ಲಿ, ನೇರಳೆ ಮಾರ್ಗದ ರೈಲುಗಳು ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಸಂಚರಿಸುತ್ತವೆ. ಸಾಮಾನ್ಯ ವೇಳಾಪಟ್ಟಿಯಂತೆ ನೇರಳೆ ಮಾರ್ಗದಲ್ಲಿ ಕೆಂಗೇರಿ ನಿಲ್ದಾಣದವರೆಗೆ ಮಂಗಳವಾರ ಮುಂಜಾನೆ 5.00 ಗಂಟೆಗೆ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗದ ಕಾರ್ಯಾಚರಣೆಗಳು ಮತ್ತು ಸೇವೆಗಳು ಪರಿಣಾಮ ಬೀರುವುದಿಲ್ಲ. ಕೆಂಗೇರಿ ಆಚೆಗಿನ ವಿಸ್ತರಣೆ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.




