Ramesh Jarakiholi : ನನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆತಂದಿರುವ  ‘ಮಹಾನಾಯಕ’ನಿಗೆ ಶಾಸ್ತಿ ಕಾದಿದೆ..!

ಬೆಳಗಾವಿ :ಜ.25: ನನ್ನ ವಿರುದ್ಧದ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾನು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಇದು ಸಿಡಿ ಪ್ರಕರಣದ ರೂವಾರಿಯಾಗಿರುವ ಕಾಂಗ್ರೆಸ್‌ನ ‘ಮಹಾನಾಯಕ’ನೋರ್ವನಿಗೆ ತಲೆನೋವಾಗಿ ಪರಿಣಮಿಸಲಿದೆ. ನನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆ ತಂದಿರುವ ಆ ಮಹಾನಾಯಕನಿಗೆ ನಾನು ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಡಿ.ಕೆ.ಶಿವಕುಮಾರ್‌ ಅವರಿಗೆ, ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಕಾದಿದೆ ಎಂದು ಎಚ್ಚರಿಸಿದರು. ಅಲ್ಲದೇ ಡಿಕೆಶಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲೂ ನಾನು ಹಿಂಜರಿಯುವುದಿಲ್ಲ ಎಂದು ರಮೇಶ್‌ ಜಾರಕಿಹೊಳಿ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದಾರೆ.

ನನ್ನ ಮೇಲಿನ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಮಹಾನಾಯಕನ ಕೈವಾಡ ಇದೆ

ನನ್ನ ಮೇಲಿನ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಹಾನಾಯಕನ ಕೈವಾಡ ಇರುವುದಕ್ಕೆ ದಾಖಲೆಗಳಿವೆ. ’40 ಕೋಟಿ ರೂಪಾಯಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದೇನೆ’ ಎಂದು ಸ್ವತಃ ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಸಾಕ್ಷಿ ಇದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರಕಾರದೊಂದಿಗೆ ಚರ್ಚಿಸಿದ್ದು, ಸಿಡಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದೇನೆ ಎಂದು ರಮೇಶ್‌ ಜಾರಕಿಹೊಳಿ ತಿಳಿಸಿದರು.

ಸಿಡಿ ಪ್ರಕರಣದಲ್ಲಿ ಶಿರಾ ಮತ್ತು ದೇವನಹಳ್ಳಿ ಮೂಲದ ಇಬ್ಬರು ಕೆಲಸ ಮಾಡಿದ್ದಾರೆ

ಸಿಡಿ ಪ್ರಕರಣದಲ್ಲಿ ಶಿರಾ ಮತ್ತು ದೇವನಹಳ್ಳಿ ಮೂಲದ ಇಬ್ಬರು ಕೆಲಸ ಮಾಡಿದ್ದಾರೆ. ದೇವನಹಳ್ಳಿ ವ್ಯಕ್ತಿಯ ಮನೆ ಮೇಲೆ ದಾಳಿ ನಡೆದಾಗ, ಅವನ ಮನೆಯಲ್ಲಿ 100ಕ್ಕೂ ಅಧಿಕ ಸಿಡಿಗಳು ಸಿಕ್ಕಿವೆ. ದಾಳಿ ಸಂದರ್ಭದಲ್ಲಿ ಸ್ವತಃ ದಾಳಿ ನಡೆಸಿದ ಅಧಿಕಾರಿಯ ಸಿಡಿ ಕೂಡ ಸಿಕ್ಕಿದೆ. ಈ ವಿಷಯವನ್ನು ಮುಚ್ಚಿಡಲಾಗಿದೆ. ಇದೆಲ್ಲದರ ಹಿಂದೆ ಮಹಾನಾಯಕ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ರಮೇಶ್‌ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.

ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಡಿಕೆಶಿ ಬಣ್ಣ ಬಯಲಾಗುತ್ತದೆ. ಹೀಗಾದರೆ ಮಾತ್ರ ಇನ್ನುಳಿದವರನ್ನಾದರರೂ ಬ್ಲಾಕ್‌ಮೇಲ್‌ನಿಂದ ಪಾರು ಮಾಡಬಹುದು. ನನ್ನ ವಿರುದ್ಧ ಇಂತಹ ನೂರು ಸಿಡಿ ಪ್ರಕರಣ ತಂದರೂ ನಾನು ಹೆದರುವುದಿಲ್ಲ ಎಂದು ರಮೇಶ್‌ ಜಾರಕಿಹೊಳಿ ಗುಡುಗಿದರು.

ಡಿ.ಕೆ.ಶಿವಕುಮಾರ್ಗೆ ನಾನು ಎಂದರೆ ಭಯ

ಡಿ.ಕೆ.ಶಿವಕುಮಾರ್‌ಗೆ ನಾನು ಎಂದರೆ ಭಯ. ಹೀಗಾಗಿಯೇ ನನ್ನ ರಾಜಕೀಯ ಜೀವನವನ್ನು ಮುಗಿಸಲು ನನ್ನ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ. ಆದರೆ ಅವರು ನನ್ನ ವೈಯಕ್ತಿಕ ಜೀವನಕ್ಕೂ ಧಕ್ಕೆ ತಂದಿದ್ದು, ನಾನು ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ರಮೇಶ್‌ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದರು. ಚುನಾವಣೆ ಹೊಸ್ತಿಲಲ್ಲಿ ಸಚಿವ ಸಂಪುಟ ವಿಸ್ತರಣೆ ಅಗತ್ಯತೆ ಇಲ್ಲ. 2023ರವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ನಾನು ಮಂತ್ರಿಯಾಗುತ್ತೇನೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸ್ಪಷ್ಟಪಡಿಸಿದ್ದೇನೆ ಎಂದು ರಮೇಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನನ್ನ ಮಾತನ್ನು ತಪ್ಪಾಗಿ ಅರ್ಥಯಸಲಾಗಿದೆ

ಇನ್ನು ಸುಳೇಭಾವಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಪ್ರತಿ ವೋಟಿಗೆ 6,೦೦೦ ರೂ. ಕೊಡುವುದಾಗಿ ಹೇಳಿದ ನನ್ನ ಮಾತನ್ನು ತಪ್ಪಾಗಿ ಅರ್ಥಯಸಲಾಗಿದೆ. ಕ್ಷೇತ್ರದ ಅಭಿವೃದ್ದಿಗೆ 10 ಕೋಟಿ ಬೇಕಾದರೂ ಖರ್ಚು ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಆದರೆ ಈ ವಿಚಾರವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ, ಕಾನೂನಾತ್ಮಕವಾಗಿಯೇ ಉತ್ತರ ಕೊಡುವುದಾಗಿ ರಮೇಶ್‌ ಜಾರಕಿಹೊಳಿ ಸವಾಲು ಹಾಕಿದ್ದಾರೆ. ಇದೇ ವೇಳೆ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ ಕೂಡ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿರುವ ರಮೇಶ್‌ ಜಾರಕಿಹೊಳಿ, ಸತ್ಯ ಯಾವತ್ತಿದ್ದರೂ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.

More News