ಬೆಂಗಳೂರು.ಜ.26: ಇಂದು ದೇಶದಲ್ಲಿ ಡಿಜಿಟಲೀಕರಣ ಯಶಸ್ವಿಯಾಗಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹಿರಿದಾದ ಪಾಲೂ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮೆಚ್ಚುಗೆ ಸೂಚಿಸಿದ್ದಾರೆ. ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಅವರನ್ನು ಸಚಿವರು ಗುರುವಾರ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ, ಅಭಿನಂದಿಸಿದರು.

ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಭೂಮಿ ಸಾಫ್ಟ್‌ವೇರ್ ಜಾರಿಗೊಳಿಸುವ ಮೂಲಕ ಕಂದಾಯ ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿ ಮಾಡಿದರು. ಇಂದು ಇಡೀ ದೇಶವೇ ಡಿಜಿಟಲ್ ಇಂಡಿಯಾ ಆಗಿ ಪರಿವರ್ತಿತವಾಗಿದೆ ಎಂದು ಅವರು ನೆನಪಿಸಿಕೊಂಡರು. ಕೃಷ್ಣ ಅವರು ರಾಜ್ಯದ ಹಿರಿಯ ಮುತ್ಸದ್ದಿ ಆಗಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಅವರು ಬಣ್ಣಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಅವರು, “ನೀವು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನನಗೆ ಕೊಟ್ಟಮೇಲೆ, ಉಳಿದ ಪುರಸ್ಕಾರಗಳು ನನ್ನನ್ನು ಅರಸಿಕೊಂಡು ಬರುತ್ತಿವೆ” ಎಂದು ನುಡಿದರು. ಇದಕ್ಕೆ ಸಚಿವರು ಕೃತಜ್ಞತೆ ವ್ಯಕ್ತಪಡಿಸಿದರು. ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪದ್ಮವಿಭೂಷಣ ಪುರಸ್ಕೃತ ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರನ್ನು ಗುರುವಾರ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿ, ಅಭಿನಂದಿಸಿದರು.




