ಬೆಂಗಳೂರು :ಜ.26: ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದಲ್ಲ, ನೂರು ಬಾರಿ ರಾಜ್ಯಕ್ಕೆ ಬಂದರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಶತಸಿದ್ಧ ಎಂದು ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುನರಾವರ್ತಿತ ಭೇಟಿಯಿಂದ ರಾಜ್ಯ ಬಿಜೆಪಿಗೆ ಯಾವ ಪ್ರಯೋಜನವೂ ಆಗದು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಖಚಿತ. ಇದನ್ನು ಮನಗಂಡಿರುವ ಬಿಜೆಪಿ ನಾಯಕರು ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಕರೆಯಿಸಿ ಪೋಸು ಕೊಡುತ್ತಿದ್ದಾರೆ. ಅಮಿತ್ ಶಾ ಅವರನ್ನು ಬಾರಿ ಬಾರಿ ರಾಜ್ಯಕ್ಕೆ ಕರೆಸುವ ಮೂಲಕ, ನಮ್ಮಿಂದ ಈ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಬಿಜೆಪಿ ನಾಯಕರೇ ರವಾನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಬಿಜೆಪಿಯ ಎಲ್ಲಾ ನಾಯಕರೂ ಭ್ರಷ್ಟಾಚಾರಿಗಳಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಪಾಪ ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದವರೇ ಆಗಿದ್ದಾರೆ. ಅವರನ್ನು ಕರೆಸಿಕೊಂಡು ಮತ ಕೇಳಿದರೆ ಜನ ಉಗಿಯುತ್ತಾರೆ. ಹೀಗಾಗಿ ನಮಗೆ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಕೇವಲ ಅಮಿತ್ ಶಾ ಅವರಷ್ಟೇ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೂ ಬಿಜೆಪಿ ಮತ್ತೆ ಮತ್ತೆ ಕರೆಯಿಸಿಕೊಳ್ಳಲಿ. ರಾಜ್ಯದ ಭ್ರಷ್ಟಾಚಾರದ ಪರಿಸ್ಥಿತಿ ಅವರಿಗೂ ಗೊತ್ತಾಗಲಿ. ರಾಜ್ಯದಲ್ಲಿ ಚುನಾವಣಾ ಪರಿಸ್ಥಿತಿ ಹೇಗಿದೆ ಎಂಬುದನ್ನು ಪ್ರಧಾನಿ ಮೋದಿಯೂ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ಇದೇ ವೇಳೆ ವ್ಯಂಗ್ಯವಾಡಿದರು.

ಬಿಜೆಪಿಯವರ ಮೀತಿ ಮೀರಿದ ಭ್ರಷ್ಟಾಚಾರದಿಂದಾಗಿ, ಇಡೀ ದೇಶದಲ್ಲಿ ಕರ್ನಾಟಕದ ಮಾನ ಹರಾಜಾಗಿದೆ. ಈ ಸತ್ಯ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಇಲ್ಲಿ ಬಂದು ಕರ್ನಾಟಕದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕರ್ನಾಟಕದ ಬಗ್ಗೆ ನಿಜಕ್ಕೂ ಪ್ರೀತಿ ಇದ್ದರೆ, ತಮ್ಮ ಪಕ್ಷದ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.




