ಬೆಂಗಳೂರು: ಜ.27: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಹುಭಾಷಾ ನಟಿ ಜಮುನಾ ಅವರು ಶುಕ್ರವಾರ ಹೈದರಾಬಾದ್ ನಲ್ಲಿರುವ ಅವರ ಮನೆಯಲ್ಲಿ ನಿಧನರಾಗಿದ್ದು, ಅನೇಕ ಸಿನಿಮಾ ರಂಗದ ಹಾಗೂ ರಾಜಕೀಯ ನಾಯಕರುಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬಣ್ಣದ ಲೋಕದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದ್ದ ನಟಿ ಜಮುನಾ. ಮೂಲತಃ ಕರ್ನಾಟಕದ ಹಂಪಿಯವರಾಗಿದ್ದ ನಟಿ, 1953 ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡದವರೇ ಆದರೂ ಸಹ ಮೊದಲಿಗೆ ಪುಟ್ಟಿಲ್ಲು ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಅದಾದ ಮೇಲೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ ತಮಿಳು, ಕನ್ನಡ ಹಾಗೂ ಬಾಲಿವುಡ್ ನಲ್ಲಿ ಸಹ ಮಿಂಚಿದ್ದಾರೆ.

ಕನ್ನಡದಲ್ಲಿ ‘ಭೂ ಕೈಲಾಸ’, ‘ಸಾಕ್ಷಾತ್ಕಾರ’ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರವಾಗಿದ್ದರು. ಎಲ್ಲ ರಂಗದಲ್ಲಿ ಸಹ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ, ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿ ಆದ ಎನ್ ಟಿ ರಾಮಾರಾವ್, ನಾಗೇಶ್ವರರಾವ್ ಹೀಗೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದರು.


ಹಂಪಿಯಲ್ಲಿ ಜನಿಸಿದ್ದ ನಟಿ ಜಮುನಾ ಗುಂಟೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲ್ಯವನ್ನು ಕಳೆದರು. ಸಣ್ಣ ವಯಸ್ಸಿನಲ್ಲಿಯೇ ರಂಗಭೂಮಿ ಅಭಿರುಚಿ ಬೆಳೆಸಿಕೊಂಡ ಅವರು, ಅನೇಕ ನಾಟಕಗಳಲ್ಲಿ ಪಾತ್ರದಾರಿಯಾಗಿದ್ದರು. ಅನಂತರ ದಿನಗಳಲ್ಲಿ ಬಣ್ಣದ ಲೋಕಕ್ಕೆ ಬಂದು ಬಂಗಾರು ಪಾಪ, ದೊಂಗ ರಾಮುಡು, ಮಿಸ್ಸಮ್ಮ, ತೆನಾಲಿ ರಾಮಕೃಷ್ಣ, ಮಾ ಇಂಟಿ ಮಹಾಲಕ್ಷ್ಮಿ, ಗುಂಡಮ್ಮ ಕಥ ಸೇರಿದಂತೆ ಸರಿಸುಮಾರು 150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನೇಕರು ಬಣ್ಣದ ಲೋಕಕ್ಕೆ ಬರ್ತಾರೆ ಹೋಗ್ತಾರೆ. ಆದರೆ, ಕೊನೆಯವರೆಗೂ ಉಳಿಯುವವರು ಕಡಿಮೆ. ಅಂತಹದರಲ್ಲಿ ಜಮುನಾ ಸಾಧನೆ ವಿಶೇಷವಾದುದು ಎಂದು ಅನೇಕ ಗಣ್ಯರು ಸ್ಮರಿಸಿದ್ದಾರೆ.

ರಾಜಕೀಯದಲ್ಲಿಯೂ ಮಿಂಚಿದ ಜಮುನಾ
ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ್ದಷ್ಟೇ ಅಲ್ಲದೇ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. 1989ರಲ್ಲಿ ರಾಜಮಂಡ್ರಿ ಎಂಪಿ ಆಗಿ ಆಯ್ಕೆ, 1990ರಲ್ಲಿ ಜನತಾ ಪಕ್ಷದ ಪರ ಪ್ರಚಾರ ಮಾಡಿದ್ದರು.