AUSTRALIA CRICKETER TRAINING: ಮೊದಲ ಟೆಸ್ಟ್‌ಗೂ ಮುನ್ನ ಬೆಂಗಳೂರಿನಲ್ಲಿ ಟ್ರೈನಿಂಗ್ ಕ್ಯಾಂಪ್ ನಡೆಸಲಿರುವ ಆಸ್ಟ್ರೇಲಿಯಾ

ಟೀಂ ಇಂಡಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದು, ನಾಗ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸೀಸ್ ಆಟಗಾರರು ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್‌ ಸಾರಥ್ಯದ ಆಸ್ಟ್ರೇಲಿಯಾ ಜ.31 ರಂದು ಭಾರತ ಪ್ರವಾಸ ಕೈಗೊಂಡಿದೆ. ಆದರೆ ಪ್ರವಾಸಿ ತಂಡ ಭಾರತದಲ್ಲಿ ಯಾವುದೇ ಅಭ್ಯಾಸ ಪಂದ್ಯಗಳನ್ನ ಆಡುವುದಿಲ್ಲ. ಇದರ ಬದಲಿಗೆ ಬೆಂಗಳೂರಿನ ಆಲೂರಿನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ‌ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಸಲಿದೆ. ಆ ಮೂಲಕ ಟೀಂ ಇಂಡಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಯಾರಿ ಆರಂಭಿಸಲಿದೆ.

ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು, ಇದಕ್ಕಾಗಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಉತ್ತಮ ಪಿಚ್ ಸಿದ್ದಪಡಿಸುತ್ತಿದೆ. ಈ ನಡುವೆ ಆಸ್ಟ್ರೇಲಿಯಾ ತಂಡ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುವ ನಿಟ್ಟಿನಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದು, ಆ ಮೂಲಕ ನಾಗ್ಪುರ್ ಮೈದಾನದ ಪಿಚ್‌ಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಲಿದೆ. ಮೊದಲ ಪಂದ್ಯ ನಡೆಯುವ ನಾಗ್ಪುರ್ ಮೈದಾನದಲ್ಲಿ ಅಭ್ಯಾಸ ನಡೆಸಲು ಮೊದಲ ಪಂದ್ಯದ ಆರಂಭಕ್ಕೆ ಮೂರು ದಿನಗಳ ಮುನ್ನ ಪಿಚ್ ಲಭಿಸಲಿದೆ.

ಕಳೆದ ವರ್ಷ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸಂದರ್ಬದಲ್ಲಿ ಸೀಮರ್ ಫ್ರೆಂಡ್ಲಿ ಪಿಚ್‌ಗಳನ್ನ ಸಿದ್ದಪಡಿಸಿದ್ದ ಪರಿಣಾಮ ಸ್ಪಿನ್‌ ಬೌಲರ್‌ಗಳ ‌ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದರು. ಹೀಗಾಗಿ ಭಾರತ ಪ್ರವಾಸ ಕೈಗೊಳ್ಳುವ ಮೊದಲ ಆಸೀಸ್ ಬೌಲರ್‌ಗಳ ಸಿಡ್ನಿಯಲ್ಲಿ ಸ್ಪಿನ್ ಕ್ಯಾಂಪ್‌ ಸಹ ನಡೆಸಿದ್ದಾರೆ. ತಂಡದ ಸ್ಪಿನ್ ಬೌಲರ್‌ಗಳಾದ ನಾಥನ್ ಲಿಯಾನ್, ಆಸ್ಟನ್ ಅಗರ್, ಮಿಚೆಲ್ ಸ್ವಿಪ್ಸನ್ ಹಾಗೂ ಟಾಡ್ ಮುರುಪ್ಪೆ ಅವರುಗಳ ಸಿಡ್ನಿಯಲ್ಲಿ ಬೌಲಿಂಗ್ ಅಭ್ಯಾಸ ನಡೆಸುವ ಮೂಲಕ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಭಾರತದ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ಅರಿತಿರುವ ಆಸ್ಟ್ರೇಲಿಯಾ, ನಾಲ್ವರು ಸ್ಪಿನ್ನರ್ಗಳ ಮೂಲಕ ಭಾರತ ಪ್ರವಾಸಕೈಗೊಂಡಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಆರಂಭಕ್ಕೂ ಮುನ್ನ ನಡೆಯುತ್ತಿರುವ ಭಾರತ ವಿರುದ್ಧದ ‌ಟೆಸ್ಟ್ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ, ಈ‌ ಹಿಂದೆ 2004-05 ಮತ್ತು 2017ರ ಭಾರತ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿಲ್ಲ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಎರಡು ಟೆಸ್ಟ್ ಸರಣಿಯಲ್ಲೂ ಸಹ ಭಾರತದ ವಿರುದ್ಧ ಸೋಲು ಕಂಡಿರುವ ಕಾಂಗರೂ ಪಡೆ, ಸಹಜವಾಗಿಯೇ ಟೆಸ್ಟ್ ಸರಣಿ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

#AUSTRALIA CRICKET TEAM #CHINNASWAMY CRICKET STADIUM #TEAM INDIA #TEST CRICKET #BORDER GAVASKAR TROPHY #SPINNERS

More News