ಬೆಂಗಳೂರು:ಫೆ.2: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೆ ಗೊಂದಲ ಇಲ್ಲ. ಅರ್ಜಿ ಹಾಕಿದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಪಕ್ಷಕ್ಕೆ ಅಧಿಕಾರ ಬರುವಾಗ ಎಲ್ಲರು ಪಕ್ಷಕ್ಕಾಗಿ ಕೆಲಸ ಮಾಡಬೇಕು, ಅಧಿಕಾರ ಸಿಕ್ಕಮೇಲೆ ಸೂಕ್ತ ಸ್ಥಾನಮಾನ ನೀಡುವುದು ಇದ್ದೇ ಇರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಳ ಜೊತೆ ಮಾತನಾಡಿದ ಅವರು, ಪ್ರದೇಶ ಚುನಾವಣಾ ಸಮಿತಿ ಮೀಟಿಂಗ್ ನಡೆಯುತ್ತಿದ್ದು, ಪ್ರತಿ ಜಿಲ್ಲೆಯಿಂದ ಎಐಸಿಸಿ ಕಾರ್ಯಾಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಸಭೆ ನಡೆಸಿ ವರದಿ ಕೊಟ್ಟಿದ್ದಾರೆ. ದೆಹಲಿಯವರು ನಾವು ಪ್ರತ್ಯೇಕವಾಗಿ ಸರ್ವೆ ಮಾಡಿಸಿದ್ದೇವೆ. ಅದನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡುವ ನಿರ್ಣಯ ಮಾಡುತ್ತೇವೆ. ಬಹುತೇಕ ಎಲ್ಲ ಶಾಸಕರೂ ಉತ್ತಮವಾಗಿ ಕೆಲಸಮಾಡಿದ್ದಾರೆ ಎಂದು ಡಿಕೆಶಿ ಹೇಳಿದರು.
ಜನಾರ್ದನ ರೆಡ್ಡಿ ಕೆಆರ್ ಪಿಪಿ ಪಕ್ಷದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷದಿಂದ ಕಾಂಗ್ರೆಸ್ ಗೆ ಯಾವುದೇ ಭೀತಿ ಎದುರಾಗುವುದಿಲ್ಲ. ಅವರ ಪಕ್ಷ, ಅವರ ಸಿದ್ಧಾಂತ ಅವರದ್ದು. ನಮ್ಮದು ಇತಿಹಾಸವಿರುವ ಪಕ್ಷ. ನಾವು ಬಡವರ ಪರ ಚಿಂತನೆ ಮಾಡುತ್ತೇವೆ. ಅವರಿಗೂ (ಜನಾರ್ದನ ರೆಡ್ಡಿ) ಒಳ್ಳೆದಾಗಲಿ, ಶುಭವಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು..




