ಹೊಸದಿಲ್ಲಿ.ಫೆ.3: ಏಕಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಇದೊಂದು ಶಾಸಕಾಂಗ ನೀತಿ, ಸಂಸದೀಯ ಸಾರ್ವಭೌಮತೆಗೆ ಸೇರಿದ ವಿಚಾರ. ಹೀಗಾಗಿ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಹವ ಮಾಡಲು ಬರುವುದಿಲ್ಲ” ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸ್ಪಷ್ಟ ಪಡಿಸಿದೆ.
ಹಿರಿಯ ವಕೀಲ ಅಶ್ವಿನಿ ಉಪಾದ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಪಿ.ಎಸ್.ನರಸಿಂಹನ್, ನ್ಯಾ.ಜೆ.ಬಿ.ಮಧಿವಾಲಾ ಅವರನ್ನು ಒಳಗೊಂಡ ಪೀಠ, ”ಹಲವು ಕಾರಣಗಳಿಗೆ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ, ಅಂತಹ ವಕಾಶವನ್ನು ಸಂವಿಧಾನದಲ್ಲೇ ನೀಡಲಾಗಿದೆ. ಜತೆಗೆ ಇಲ್ಲಿ ಸಂಸತ್ ನಿರ್ಧಾರ ತೆಗೆದುಕೊಳ್ಳಬೇಕಾದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಉಪಾದ್ಯಾಯ ಪರ ಹಾಜರಾದ ವಕೀಲ ಗೋಪಾಲ್ ಶಂಕರ್ ನಾರಾಯಣ್, ‘ ಅಭ್ಯರ್ಥಿಯು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಿಂದಲೂ ಆಯ್ಕೆಯಾದರೆ, ಒಂದು ಕ್ಷೇತ್ರ ತೆರವು ಮಾಡಬೇಕಾಗುತ್ತದೆ, ಇದರಿಂದ ಉಪಚುನಾವಣೆಗೆ ದಾರಿಯಾಗಿ, ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಇದು ಸಂವಿಧಾನದ 19 ಹಾಗೂ 21ನೇ ವಿಧಿಯ ಉಲ್ಲಂಘನೆ ಎಂದು ವಾದಿಸಿದರು.

1996ರ ತಿದ್ದುಪಡಿಗೆ ಮೊದಲು ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಕ್ಷೇತ್ರಗಳ ಸಂಖ್ಯೆಗೆ ನಿರ್ಬಂಧವಿರಲಿಲ್ಲ. ತಿದ್ದುಪಡಿ ಬಳಿಕ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸಲಾಯಿತು,” ಎಂದು ವಕೀಲರು ವಾದ ಮಂಡಿಸಿದರು.
ಚುನಾವಣಾ ಆಯುಕ್ತರು ಸಹ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 33(7)ಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಕಾನೂನು ಆಯೋಗದ 255ನೇ ವರದಿಯಲ್ಲಿ ಅಭ್ಯರ್ಥಿಗಳನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದೆ ಎಂಬ ಅಂಶವನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
“ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಸಂಸತ್ತಿನ ಕೆಲಸ, ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದಾಗ ಎಲ್ಲಿಂದ ಆಯ್ಕೆಯಾಗುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಹೀಗಾಗಿ ಎರಡು ಕಡೆ ಸ್ಪರ್ಧೆ ಮಾಡುವುದರಲ್ಲಿ ಯ ತಪ್ಪೇನಿದೆ ? ಇದೆಲಾ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯ ಒಂದು ಭಾಗ,” ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.




