ಲಖನೌ:ಫೆ.3; ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಗರ್ಭಗುಡಿಯಲ್ಲಿ ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿಗ್ರಹಗಳನ್ನು ಕೆತ್ತನೆ ಮಾಡಲು 2 ಅಪರೂಪದ ಸಾಲಿಗ್ರಾಮ ಶಿಲೆಗಳನ್ನು ಗುರುವಾರ ನೇಪಾಳದಿಂದ ತರಿಸಲಾಗಿದೆ.
ಅತ್ಯಂತ ವಿಶೇಷವಾದ ಈ ಶಿಲೆಗಳು ಸಾವಿರಾರು ವರ್ಷಗಳ ಹಳೆಯದು ಎನ್ನಲಾಗಿದೆ. 2 ಶಿಲೆಗಳ ಪೈಕಿ ಒಂದು 26 ಟನ್ ತೂಕವಿದ್ದರೆ, ಇನ್ನೊಂದು ಶಿಲೆ 14 ಟನ್‌ಗಳಷ್ಟು ತೂಗುತ್ತದೆ. ಇದನ್ನು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನೇಪಾಳದ ಮುಸ್ತಾಂಗ್ ಜಿಲ್ಲೆಯಿಂದ ಅಯೋಧ್ಯೆಗೆ ತರಿಸಲಾಗಿದೆ. ಶಿಲೆಗಳನ್ನು ತರಿಸಲು 2 ವಿಭಿನ್ನ ಟ್ರಕ್‌ಗಳನ್ನು ಬಳಸಲಾಗಿದೆ.

ಈ ವಿಶೇಷ ಶಿಲೆಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸುವುದಕ್ಕೂ ಮುನ್ನ ರಾಮನ ಜನ್ಮಸ್ಥಳದಲ್ಲಿ ಅರ್ಚಕರು ಹಾಗೂ ಸ್ಥಳೀಯರು ಹೂಮಾಲೆಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿದ್ದಾರೆ.
ಅಪರೂಪ ಶಿಲೆಗಳ ವಿಶೇಷತೆ:

ಶ್ರೀರಾಮ ಹಾಗೂ ಸೀತಾ ಮಾತೆಯ ವಿಗ್ರಗಳನ್ನು ಕೆತ್ತಲಾಗುವ ಈ ವಿಶೇಷ ಶಿಲೆಗಳು ನೇಪಾಳದ ಮುಸ್ತಾಂಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ (ಮೋಕ್ಷದ ಸ್ಥಳ) ಸಮೀಪವಿರುವ ಸ್ಥಳದಲ್ಲಿ ಗಂಡಕಿ ನದಿ ಬಳಿ ದೊರಕಿವೆ. ಈ ಶಿಲೆಗಳಿಂದ ಶ್ರೀರಾಮನ ಮಗುವಿನ ರೂಪದ ವಿಗ್ರಹವನ್ನು ಕೆತ್ತಲು ತೀರ್ಮಾನಿಸಲಾಗಿದೆ. ಈ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿಯ ಸಂದರ್ಭ ಮೂರ್ತಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಶಿಲೆಗಳಲ್ಲಿ ಭಗವಾನ್ ಶ್ರೀರಾಮನ ಜೊತೆಯಲ್ಲೇ ಸೀತಾಮಾತೆಯ ವಿಗ್ರಹವನ್ನೂ ಕೆತ್ತನೆ ಮಾಡಲಾಗುವುದು. 2024ರ ಜನವರಿ 14 ರಂದು ಮಕರ ಸಂಕ್ರಾಂತಿ ವೇಳೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗುಡಿಯಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಗರ್ಭ ಗುಡಿಯಲ್ಲಿ ನೂತನವಾಗಿ ಕೆತ್ತನೆ ಮಾಡಲಾದ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಈ ಹಿಂದೆಯೇ ಟ್ರಸ್ಟ್ ಮಾಹಿತಿ ನೀಡಿತ್ತು.

ಐತಿಹ್ಯವೇನು?
ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಸೀತಾ ಮಾತೆಯು ನೇಪಾಳದ ಜನಕ ಮಹಾರಾಜನ ಪುತ್ರಿ. ಅಯೋಧ್ಯಾ ರಾಮನ ಜೊತೆಗೆ ಸೀತೆಯ ವಿವಾಹ ಆಗುತ್ತದೆ. ಅಯೋಧ್ಯೆಯಲ್ಲಿ ರಾಮ ನವಮಿಯ ದಿನದಂದು ಶ್ರೀರಾಮನ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲೇ ನೇಪಾಳದ ಜನಕಪುರದಲ್ಲಿ ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ ಪಕ್ಷದ ಐದನೇ ದಿನ ಈ ಆಚರಣೆ ನಡೆಯುತ್ತದೆ. ಕ್ಯಾಲೆಂಡರ್ ಪ್ರಕಾರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಈ ಆಚರಣೆ ನಡೆಯುತ್ತದೆ.




