ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯ ಫೆ.9ರಂದು ಆರಂಭವಾಗಲಿದ್ದು, ಇದಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ.
ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಈ ಎರಡು ತಂಡಗಳು ಕ್ರಿಕೆಟ್ ಅಂಗಳದಲ್ಲಿ ಹಲವು ಬಾರಿ ಮುಖಾಮುಖಿ ಆಗಿದ್ದು, ಉಭಯ ತಂಡಗಳ ಟೆಸ್ಟ್ ಮುಖಾಮುಖಿಯ ಅಂಕಿ ಅಂಶಗಳು ಹೀಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1947ರಿಂದ ಈವರೆಗೂ 102 ಟೆಸ್ಟ್ ಪಂದ್ಯಗಳನ್ನಾಡಿವೆ. ಇದರಲ್ಲಿ ಭಾರತ 30 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ. ಆಸ್ಟ್ರೇಲಿಯಾ 43 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಉಳಿದ 28 ಪಂದ್ಯಗಳ ಡ್ರಾನಲ್ಲಿ ಅಂತ್ಯಗೊಂಡಿದೆ.

ಪ್ರಮುಖವಾಗಿ ಆಸೀಸ್ ಅಂಗಳದಲ್ಲಿ ಭಾರತ ದೊಡ್ಡಮಟ್ಟದ ಸಕ್ಸಸ್ ಕಂಡಿಲ್ಲ. ಕಾಂಗರೂ ನಾಡಿನಲ್ಲಿ ಟೀಂ ಇಂಡಿಯಾ, ಒಟ್ಟು 52 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದರಲ್ಲಿ ಕೇವಲ 9 ಪಂದ್ಯದಲ್ಲಿ ಗೆದ್ದಿದೆ. ಆದರೆ ತವರಿನಲ್ಲಿ ಭಾರತದ ಪ್ರಾಬಲ್ಯ ಹೆಚ್ಚಿದ್ದು, 50 ಪಂದ್ಯಗಳಲ್ಲಿ 21ರಲ್ಲಿ ಗೆದ್ದು, 13 ಪಂದ್ಯದಲ್ಲಿ ಸೋಲು ಕಂಡಿದೆ.
ಇತ್ತೀಚೆಗೆ ನಡೆದ ಸರಣಿಯಲ್ಲಿ ಭಾರತದ ಪ್ರಾಬಲ್ಯ ಹೆಚ್ಚಿದ್ದು, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಕೊನೆಯದಾಗಿ ಸೋತಿದ್ದು 2004ರಲ್ಲಿ. ಅಲ್ಲದೇ ಇಂದು ವಿಶ್ವದ ಬಲಿಷ್ಠ ತಂಡವಾಗಿರುವ ಭಾರತ ಆಸೀಸ್ ಅಂಗಳದಲ್ಲೂ ಪ್ರಾಬಲ್ಯ ಮೆರೆದಿದೆ. ಹೀಗೆ ಕ್ರಿಕೆಟ್ ಅಂಗಳದಲ್ಲಿ ಹಲವು ದಶಕಗಳ ಮುಖಾಮುಖಿ ಹೊಂದಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೊಂದು ಹೈವೋಲ್ಟೇಜ್ ಸರಣಿಗಾಗಿ ಸಜ್ಜಾಗಿವೆ.




