ನವದೆಹಲಿ : ಇನ್ನೇನು ಎರಡು ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಈ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಮಾಡಬೇಕೆಂದ ರಾಜ್ಯ ನಾಯಕರ ಪ್ರಯತ್ನಕ್ಕೆ ಎಐಸಿಸಿ ಸ್ಪಂದಿಸಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ವಿಚಾರವಾಗಿ ಎಐಸಿಸಿ ಸ್ಕ್ರೀನಿಂಗ್ ಕಮಿಟಿಯನ್ನು ರಚಿಸಿದ್ದು, ಮೋಹನ್ ಪ್ರಕಾಶ್ ಇದರ ಅಧ್ಯಕ್ಷರಾಗಿರುತ್ತಾರೆ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರಜ್ ದಂಗಿ, ಮೊಹಮ್ಮದ್ ಜಾವೇದ್ ಹಾಗೂ ಸಪ್ತಗಿರಿ ಉಲಕಾ ಇದರ ಸದಸ್ಯರಾಗಿರುತ್ತಾರೆ. ಹಾಗೆಯೇ ಅಧಿಕೃತ ಸದಸ್ಯರಾಗಿ ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್. ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ.ಜಿ ಪರಮೇಶ್ವರ್ ಹಾಗೂ ಐದು ಮಂದಿ ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳು, ಚುನಾವಣಾ ಸಮಿತಿಯ ಶಿಫಾರಸ್ಸುಗಳನ್ನು ಸ್ಕ್ರೀನಿಂಗ್ ಮಾಡಲಿದ್ದಾರೆ.




