Caste Basis CM : ಬಿಜೆಪಿ ಹೈಕಮಾಂಡ್ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಿಲ್ಲ : ರಘುಪತಿ ಭಟ್

ಬೆಂಗಳೂರು:ಫೆ.9: ಬಿಜೆಪಿ ಹೈಕಮಾಂಡ್ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಿಲ್ಲ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದರು. ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿ ಸಿಎಂ ಆಗಬಾರದು ಅಂತ ಏನೂ ಇಲ್ಲ ಎಂದರು.

ಬ್ರಾಹ್ಮಣ ಸಿಎಂ ಎಂಬ ವಿಚಾರಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿ, ನಮ್ಮ ಹೈಕಮಾಂಡ್ ಯಾವಾಗಲೂ ಜಾತಿ ಆಧಾರದ ಮೇಲೆ ಯಾರನ್ನು ಸಿಎಂ ಮಾಡಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಜಾತಿ ಆಧಾರಿತವಾದ ವಿಚಾರವನ್ನು ತೆಗೆದಿದ್ದಾರೆ. ಅವರಿಗೆ ಅವರ ಕುಟುಂಬದವರೇ ಯಾರಾದ್ರೂ ಸಿಎಂ ಆಗಬೇಕು ಅಷ್ಟೇ ಎಂದರು. ಕುಮಾರಸ್ವಾಮಿ ಅವರದ್ದು ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಅಷ್ಟೇ. ನಮ್ಮಲ್ಲಿ ಆ ರೀತಿ ಇಲ್ಲ ಎಂದರು.

ಏನಿದು ವಿವಾದ?

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿ, ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ ಜೋಶಿಯನ್ನು ಸಿಎಂ ಮಾಡುವ ಹುನ್ನಾರ ಆರ್. ಎಸ್ ಎಸ್ ನಡೆಸುತ್ತಿದೆ. ಅವರ ಜೊತೆಗೆ ಎಂಟು ಮಂದಿ ಡಿಸಿಎಂ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಪ್ರಹ್ಲಾದ್ ಜೋಶಿ ಗಾಂಧಿಯನ್ನು ಕೊಂದ, ಶೃಂಗೇರಿ ಮಠಕ್ಕೆ ದಾಳಿ ನಡೆಸಿದ ಪೇಶ್ವೆ ವಂಶಸ್ಥರು ಎಂದು ಕಿಡಿಕಾರಿದ್ದರು. ಕುಮಾರಸ್ವಾಮಿ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಯ ಹಲವು ಮುಖಂಡರು ಇದನ್ನು ಟೀಕೆ ಮಾಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವ ಗೋವಿಂದ ಕಾರಜೋಳ ಕುಮಾರಸ್ವಾಮಿ ನಡೆಗೆ ಟೀಕೆ ವ್ಯಕ್ತಪಡಿಸಿದ್ದರು.

ಅದರಲ್ಲೂ ಆರ್.ಅಶೋಕ್, ಕುಮಾರಸ್ವಾಮಿ ಅವರು ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಜಾತಿ ನಡುವೆ ಭಿನ್ನಾಭಿಪ್ರಾಯ ಮೂಡಿಸುವ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

More News

You cannot copy content of this page