ಬೆಂಗಳೂರು :ಫೆ.10: ಕೆಂಗಲ್ ಗೇಟ್ ಮುಂದೆ ನಾವೇ ಸರ್ಕಾರ ಮಾಡ್ತೀವಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ. ಅತಿಯಾದ ವಿಶ್ವಾಸ ತೋರಿಸಿ 2018, 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು? ಹೀಗೆ ವಿಶ್ವಾಸ ಇಟ್ಟುಕೊಂಡು ಎದುರಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದಾರೆ, ಈಗಲೂ ಅದೇ ಆಗುತ್ತೆ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ರಾಜಕೀಯ ತಂತ್ರಗಾರಿಕೆ ನಡೆಯಲ್ಲ
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯದ ಜನರು ಯಾರನ್ನ ಸಿಎಂ ಮಾಡಬೇಕು ಎಂಬುವುದು ತೀರ್ಮಾನ ಮಾಡುತ್ತಾರೆ. ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ತಂತ್ರಗಾರಿಕೆ ಮಾಡಲು ಈ ರಿತಿಯ ಹೇಳಿಕೆ ಕೊಡುತಿದ್ದಾರೆ. ನೇರ ಯುದ್ಧ ಕೆಲವರು ಮಾಡ್ತಾರೆ, ಮಾಯ ಯುದ್ಧ ಕುಮಾರಸ್ವಾಮಿ ಅಂತವರು ಮಾಡುತ್ತಾರೆ ಎಂದು ಕಿಡಿಕಾರಿದರು.

ಕಳೆದ ಬಾರಿ ಲಿಂಗಾಯತ ಮತ ಒಡೆಯುವ ಕೆಲಸ ಮಾಡಿದ್ರು, ಕುಮಾರಸ್ವಾಮಿ ಹೇಳಿಕೆ ನೋಡಿದ್ರೆ ಇವರೇ ಯಡಿಯೂರಪ್ಪರನ್ನು ಸಿಎಂ ಮಾಡಿದ್ದಾರೆ ಅಂತ ಸಿಂಪತಿ ತೋರಿಸುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಬಾರದು ಅಂತ ತಡೆದಿದ್ದೇ ಕಾಂಗ್ರೆಸ್ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು




