India lead By Innings : ರೋಹಿತ್‌, ಜಡೇಜಾ ಹಾಗೂ ಅಕ್ಸರ್‌ ಜವಾಬ್ದಾರಿಯುತ ಆಟ : ಭಾರತಕ್ಕೆ ಇನ್ನಿಂಗ್ಸ್‌ ಮುನ್ನಡೆ

ನವದೆಹಲಿ:ಫೆ.10: ನಾಯಕ ರೋಹಿತ್‌ ಶರ್ಮಾ(120) ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದ್ದು, 2ನೇ ದಿನದಾಟದಂತ್ಯಕ್ಕೆ 144 ರನ್‌ಗಳ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

ನಾಗ್ಪುರ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಆದರೆ ದಿನದ ಅಂತ್ಯಕ್ಕೆ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ(66) ಹಾಗೂ ಅಕ್ಸರ್‌ ಪಟೇಲ್‌(52) ಬಾರಿಸಿದ ಅರ್ಧಶತಕದಿಂದ ಭಾರತ ಮೇಲುಗೈ ಸಾಧಿಸಿದೆ. ಪರಿಣಾಮ 2ನೇ ದಿನದಂತ್ಯಕ್ಕೆ 7ವಿಕೆಟ್‌ಗೆ 321 ರನ್‌ಗಳಿಸಿದ್ದು, 144 ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಭಾರತದ ಪರ 2ನೇ ದಿನದಾಟ ಆರಂಭಿಸಿದ ರೋಹಿತ್‌ ಶರ್ಮ(120) ಹಾಗೂ ರವಿಚಂದ್ರನ್‌ ಅಶ್ವಿನ್‌(23) ಉತ್ತಮ ಆರಂಭ ನೀಡಲಿಲ್ಲ. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು 3ನೇ ಕ್ರಮಾಂಕದಲ್ಲಿ ಬಂದಿದ್ದ ಅಶ್ವಿನ್‌(23) ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರದಲ್ಲಿ ಬಂದ ಚೇತೇಶ್ವರ್‌ ಪುಜಾರ(7), ವಿರಾಟ್‌ ಕೊಹ್ಲಿ(12) ಹಾಗೂ ಸೂರ್ಯಕುಮಾರ್‌ ಯಾದವ್‌(8) ಹಾಗೂ ಕೆಎಸ್‌ ಭರತ್‌(8) ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದರು.

ಆದರೆ ನಾಯಕನಾಗಿ ಜವಾಬ್ದಾರಿಯ ಆಟವಾಡಿದ ರೋಹಿತ್‌ ಶರ್ಮ, ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಭಾರತ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರೋಹಿತ್‌ ಶರ್ಮ ಔಟಾದ ಬಳಿಕ ಜೊತೆಯಾದ ರವೀಂದ್ರ ಜಡೇಜಾ(66) ಹಾಗೂ ಅಕ್ಸರ್‌ ಪಟೇಲ್‌(52) ಅತ್ಯುತ್ತಮ ಜೊತೆಯಾಟವಾಡಿದರು. 8ನೇ ವಿಕೆಟ್‌ಗೆ ಅಜೇಯ 81 ರನ್‌ ಕಲೆಹಾಕಿರುವ ಈ ಜೋಡಿ, ತಂಡದ ಲೀಡ್‌ ಹೆಚ್ಚಿಸಿದರು.

ಆಸ್ಟ್ರೇಲಿಯಾ ಪರ ಟಾಡ್‌ ಮರ್ಫಿ(5/82) ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸಿದರು. ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸ್ಪಿನ್‌ ದಾಳಿ ನಡೆಸಿದ ಮರ್ಫಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಉಳಿದಂತೆ ಲಿಯಾನ್‌ ಹಾಗೂ ಕಮ್ಮಿನ್ಸ್‌ ತಲಾ 1 ವಿಕೆಟ್‌ ಪಡೆದರು.

More News