ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹಾಗೂ 2 ಎ ವರ್ಗಕ್ಕೆ ಸೇರಿಸುವ ಕುರಿತಾಗಿ ಎರಡು ದಿನದೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಪಂಚಮಸಾಲಿ ಪೀಠಾಧಿಪತಿಗಳಾದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 48 ಗಂಟೆಯೊಳಗೆ ತನ್ನ ನಿಲುವು ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ಹೇಳಿದರು.
ಅಕ್ಟೋಬರ್ 1 ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ ಭವನದಲ್ಲಿ ಚಳವಳಿಗಾರರ ಸಮಾವೇಶ ನಡೆಯಲಿದೆ. ಅಂದು ಸರಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸೇರಿದಂತೆ ಸಚಿವರು ಬಂದು ಭರವಸೆ ಕೊಟ್ಡರೆ, ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 15 ರೊಳಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಈಗಾಗಲೇ ಗಡುವು ಮುಗಿದಿರುವ ಕಾರಣ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ ಎಂದು ತಮ್ಮ ನಿರ್ಧಾರವನ್ನು ಶ್ರೀಗಳು ಸಮರ್ಥಿಕೊಂಡರು.
ನಮಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಎಲ್ಲರ ಮೇಲೆ ವಿಶ್ವಾಸವಿದೆ. ಸರಕಾರ ಕೂಡಲೇ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.
ಹಿಂದುಳಿದ ವರ್ಗಗಳ ಆಯೋಗವು ಕೇಳಿರುವ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆಯೋಗವು ಸರಕಾರಕ್ಕೆ ‘ ಸಕಾರಾತ್ಮಕ ವರದಿ’ ನೀಡುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತಪಡಿಸಿದರು. ನಮ್ಮಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ ಎಂದು ತಿಳಿಸಿದರು.
ನಾವು ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದ್ದೇವು. ಮೊನ್ನೆ ನಡೆದ ಅಧಿವೇಶನದಲ್ಲಿ ನಮ್ಮ ಹೋರಾಟ ಸಮಿತಿಯ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಇಟ್ಟಿದ್ದರು. ಇದಕ್ಕೆ ಸಿಎಂ ಕೂಡ ಉತ್ತರವನ್ನ ಕೊಡುವಾಗ ಗದ್ದಲ ಕೂಡ ಆಯ್ತು ಎಂದರು.
ಗದಗದಲ್ಲಿ ನಡೆದ ಸಭೆಗೆ ಸಚಿವ ಸಿ.ಸಿ.ಪಾಟೀಲರು ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಮಗೆ ಸಿಎಂ ಮೇಲೆ ವಿಶ್ವಾಸವಿದೆ. ನಮ್ಮಹೋರಾಟಕ್ಕೆ ಸ್ಪಂದಿಸಿದ್ದು, ಅವರಿಂದ ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ ಎಂದು ಹೇಳಿದರು.
ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ಅಭಿಯಾನ ಮುಗಿಯಲಿದೆ. ಅಂದು ಮತ್ತೊಂದು ಸಭೆಯನ್ನ ನಾವು ಮಾಡುತ್ತೇವೆ. ಅಂದು ಸಿಎಂ ಸಂಪೂರ್ಣ ಭರವಸೆ ಕೊಡಬೇಕು. ಕೊಡದಿದ್ದರೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ತೇವೆ, ಮತ್ತೆ ಸತ್ಯಾಗ್ರಹ ಹಾದಿ ಅನಿವಾರ್ಯವಾಗಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ಸಂದೇಶವನ್ನು ಸ್ವಾಮೀಜಿ ರವಾನಿಸಿದರು.
ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿಸುವುದಷ್ಟೇ ಗುರಿಯಾಗಿದೆ. ನನಗೆ ಅವಕಾಶ ಕೊಟ್ಟ ಸಮುದಾಯಕ್ಕೆ ಒತ್ತುಕೊಡಬೇಕು. ಮನೆ ಗೆದ್ದು ಮಾರ್ಗ ಗೆಲ್ಲಬೇಕು. ಮೊದಲು ಸಮುದಾಯದ ಪರ ಧ್ವನಿ ಎತ್ತಿದ್ದೇನೆ ಎಂದು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಬೇರೆ ಸಮುದಾಯಗಳ ಪರವೂ ಧ್ವನಿ ಎತ್ತುತ್ತೇನೆ
ಉಳಿದ ಸಮುದಾಯಕ್ಕೂ ಮೀಸಲಾತಿ ಕೊಡಬೇಕು. ಇದು ನಮ್ಮ ಹೋರಾಟದ ಗುಣವೂ ಹೌದು. ಎಲ್ಲರನ್ನ ಒಟ್ಟಾಗಿ ಕರೆದೊಯ್ಯುವುದೇ ನಮ್ಮ ಉದ್ದೇಶ. ನಾವು ಇನ್ನೊಬ್ಬರ ಮೀಸಲಾತಿಯನ್ನ ಕಿತ್ತುಕೊಳ್ಳುತ್ತಿಲ್ಲ ಎಂದು ತಮ್ಮ ಹೋರಾಟವನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದರು.
ವಾಲ್ಮೀಕಿ, ಹಾಲುಮತ ಸಮುದಾಯಗಳಿಗೂ ಮೀಸಲಾತಿ ಕೊಡಿ ಎಂದು ಕೇಳಿದ್ದೇವೆ. ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇದು ನಮಗೆ ಮಾಡು ಅಥವಾ ಮಡಿಯುವ ಹೋರಾಟ. ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟ ನಡೆಸಲಾಗಿತ್ತು. ಹೋರಾಟದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.
ನಾವು 39 ದಿನಗಳ ಕಾಲ ನಾವು ಪಾದಯಾತ್ರೆ ಮಾಡಿದ್ದೆವು. ಸರ್ಕಾರವೇ ಮುಂದೆ ಬಂದು ಸ್ಪಂದಿಸಿದೆ. ಮಾಜಿ ಸಿ. ಎಂ. ಯಡಿಯೂರಪ್ಪನವರೇ ಆರು ತಿಂಗಳು ಕೇಳಿದ್ದರು. ಈಗ ಆರು ತಿಂಗಳ ಸಮಯ ಮುಗಿದಿದೆ. ಹಾಗಾಗಿ ಸರ್ಕಾರ ಸ್ಪಷ್ಟವಾದ ಭರವಸೆ ಕೊಡಬೇಕು ಎಂದು ಒತ್ತಾಯ ಮಾಡಿದರು.




