ಬೆಂಗಳೂರು:ಫೆ.11: ಕಡಿಮೆ ಬಂಡವಾಳದಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ಬಾಕ್ಸಾಪೀಸ್ ನಲ್ಲಿ ಸಖತ್ ಸದ್ದು ಮಾಡಿತು. ಅದಾದ ಮೇಲೆ ಕಾಂತಾರದ ಮುಂದುವರೆದ ಭಾಗ ನಿರ್ಮಾಣದ ಸಿದ್ದತೆ ನಡೆಯುತ್ತಿದ್ದು, ರಿಷಬ್ ಚಿತ್ರಕಥೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ರಿಷಬ್ ಶೆಟ್ಟಿ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಕಾಂತಾರ ಮುಂದು ವರೆದ ಭಾಗದಲ್ಲಿ ನಟಿಸಲಿದ್ದಾರಾ ಎಂಬ ಅನುಮಾನ ಶುರುವಾಗಿವೆ.

ತೆಲುಗು, ಹಿಂದಿ ಸಿನಿಮಾ ಇಂಡಸ್ಟ್ರಿ ಯಲ್ಲಿ ಕೋಟ್ಯಾಂತರ ರೂ.ಗಳು ಖರ್ಚು ಮಾಡಿ ಸಿನಿಮಾ ಮಾಡ್ತಾರೆ. ಅವು ಬಹಳಷ್ಟು ಸದ್ದು ಮಾಡುತ್ತದೆ. ಬಾಕ್ಸಾಪೀಸ್ ನಲ್ಲಿ ಹೆಸರು ಪಡೆಯುತ್ತವೆ. ಅದರಲ್ಲಿ ಈಗಾಗಲೇ ಫೇಮಸ್ ಆದ ನಟರು ಮತ್ತು ನಟಿಯರು, ಅದ್ದೂರಿಯಾದ ಸೆಟ್ ಗಳನ್ನು ಅಳವಡಿಸಿರ್ತಾರೆ. ಅವು ಹೆಚ್ಚು ಗೆಲ್ಲುತ್ತವೆ. ಆದರೆ, ಕಂಟೆಂಟ್ ಆಧಾರಿತ ಸಿನಿಮಾಗಳು ಗೆಲ್ಲುವುದು ತೀರ ವಿರಳ. ಅಂತಹದರಲ್ಲಿ ಕಾಂತಾರ ಕನ್ನಡದ ಸಿನಿಪ್ರಿಯರ ಮನ ಗೆದ್ದಿತು. ಅಲ್ಲದೆ, ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಎಲ್ಲಾ ಭಾಗದ ಜನರನ್ನು ಆಕರ್ಷಿಸಿತು. ಇದಾದ ಬೆನ್ನಲ್ಲೇ ಕಾಂತಾರ 1 ಮಾಡಲು ಸಿನಿಮಾ ತಂಡ ನಿರ್ಧಾರ ಮಾಡಿತು.

ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ 1 ತೆರೆಗೆ ತರಲು ಭರಪೂರ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದಾರೆ. ನಿರ್ದೇಶಕರು ಚಿತ್ರಕಥೆ ಮಾಡುವುದರಲ್ಲಿ ತಲ್ಲೀನರಾಗಿದ್ದು, ಎಪ್ರಿಲ್ ನಿಂದ ಶೂಟಿಂಗ್ ನಡೆಸುವ ಆಲೋಚನೆಯಲ್ಲಿದ್ದಾರೆ. ಇತ್ತೀಗೆ ನಡೆದ ಕಾಂತಾರ ಶತದಿನೋತ್ಸವದ ಸಮಾರಂಭದಲ್ಲಿ ಮುಂದಿನ ಕಾಂತಾರ ಚಿತ್ರವು ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರಲಿದೆ ಎಂಬುದನ್ನು ತಿಳಿಸಿದ್ದರು. ಆದರೆ ಅದರಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬುದು ಹೇಳಿರಲಿಲ್ಲ.


ಕಾಂತಾರ ಮುಂದಿನ ಸಿನಿಮಾದಲ್ಲಿ ಯಾವೆಲ್ಲಾ ಪಾತ್ರ ಇರಲಿವೆ ಎಂಬುದನ್ನು ಪ್ರೇಕ್ಷಕರು ನಿರೀಕ್ಷೆ ಮಾಡುತ್ತಿದ್ದಾರೆ. ಅದರ ಮಧ್ಯೆ ನಟಿ ಊರ್ವಶಿ ಜೊತೆಗಿನ ಫೋಟೊ ಹಂಚಿಕೊಳ್ಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ ರಿಷಬ್.. ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ರಿಷಬ್ ಜೊತೆಗೂಡಿ ನಿಂತಿರುವ ಫೋಟೋ ಹಾಕಿಕೊಂಡಿರುವ ನಟಿ ಊರ್ವಶಿ ರೌಟೆಲಾ ಕಾಂತಾರ 2 ಲೋಡಿಂಗ್ ಅಂತ ಬರೆದುಕೊಂಡಿದ್ದಾರೆ. ಅದನ್ನು ನಿರ್ದೇಶಕ ರಿಷಬ್ ಗೆ ಹಾಗೂ ಹೊಂಬಾಳೆ ಫಿಲ್ಮ್ಸ್ ಗೆ ಟ್ಯಾಗ್ ಮಾಡಿದ್ದಾರೆ. ಇದನ್ನು ನೋಡಿರುವ ಪ್ರೇಕ್ಷಕರು ಯಾಕೆ ಕಾಂತಾರ 2 ಅಂತ ಬರ್ಕೊಂಡಿದ್ದಾರೆ ಎಂದು ಗೊಂದಲದಲ್ಲಿ ಇದ್ದಾರೆ.




