IT Raid At BBC’s Delhi Office : ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ

ನವದೆಹಲಿ.ಫೆ.14: ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆ ಕುರಿತು ಯುನೈಟಡ್​ ಕಿಂಗ್​ಡಮ್​​ನ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ತಯಾರಿಸಿದ ಸಾಕ್ಷ್ಯಚಿತ್ರದ ವಿವಾದದ ಬೆನ್ನಲ್ಲೇ ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ತನಿಖೆಯ ಭಾಗವಾಗಿ ಶೋಧ ನಡೆಸಲಾಗುತ್ತಿದೆ. ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅದರ ಭಾರತೀಯ ಬ್ರಾಂಚ್​ಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕಚೇರಿಯ ಸಿಬ್ಬಂದಿಯನ್ನು ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಪಿಎಂ ಮೋದಿ ಕುರಿತು ‘ಇಂಡಿಯಾ: ದಿ ಮೋದಿ ಕ್ವಶ್ಚನ್’ (India: The Modi Question)ಹೆಸರಿನ ಸಾಕ್ಷ್ಯಚಿತ್ರವೊಂದನ್ನು ಬಿಬಿಸಿ ತಯಾರಿಸಿತ್ತು. ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಈ ಸಾಕ್ಷ್ಯಚಿತ್ರದಕ್ಕೆ ಸಂಬಂಧಿಸಿದ ಲಿಂಕ್​ಗಳನ್ನು, ಯೂಟ್ಯೂಬ್​ ವಿಡಿಯೋಗಳನ್ನು ಹಾಗೂ ಟ್ವೀಟ್​ಗಳನ್ನು ಭಾರತ ಸರ್ಕಾರ ಬ್ಲಾಕ್​ ಮಾಡಿತ್ತು. ಇದನ್ನು ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳು ಟೀಕಿಸಿದ್ದವು. ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ಡಾಕ್ಯುಮೆಂಟರಿಯಲ್ಲಿ 2002ರ ಗುಜರಾತ್ ಗಲಭೆ ವೇಳೆ ಅಂದಿನ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರವನ್ನು ತೋರಿಸಲಾಗಿದೆ. ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪಕ್ಷಪಾತಿ ಧೋರಣೆಯುಳ್ಳ ಅಪಪ್ರಚಾರದ ತುಣಕು ಎಂದು ಕಿಡಿಕಾರಿತ್ತು.

More News