ಬೆಂಗಳೂರು:ಫೆ.15: ರಾಜ್ಯದ ಜನರ ಒಲವು ಬಿಜೆಪಿಯ ಕಡೆಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಗಳಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಬೆಂಗಳೂರಿನಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‍ನಲ್ಲಿ ಪಕ್ಷದ ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು,
ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಷ್ಠ ನಾಯಕತ್ವ ನಮ್ಮ ಜತೆಗಿದೆ. ಯಂಕ, ನಾಣಿ ನಾಯಕತ್ವವು ಜತೆಗಿರುವ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ವಿಶ್ವಾಸಾರ್ಹ ಮತ್ತು ಕ್ರಿಯಾಶೀಲ ಕಾರ್ಯಕರ್ತರ ದೊಡ್ಡ ಪಡೆ ನಮ್ಮ ಬಿಜೆಪಿ ಪಕ್ಷದ ಜತೆಗೆ ಇದೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೋದಿ ಸರ್ಕಾರದ 8-9 ವರ್ಷಗಳ ಸಾಧನೆ, ಜನಪರ ಆಡಳಿತವನ್ನು ಜನರಿಗೆ ತಿಳಿಸಬೇಕು. ಮೋದಿಯವರು ನಮ್ಮ ಪಕ್ಷದ ಪ್ರಮುಖ ಆಸ್ತಿ ಎಂದು ಬಿಎಸ್‌ವೈ ವಿವರಿಸಿದರು.
ಜನ್‍ಧನ್, ಆಯುಷ್ಮಾನ್, ಶೌಚಾಲಯ ನಿರ್ಮಾಣ, ಮನೆಮನೆಗೆ ನಳ್ಳಿನೀರು ಸೇರಿ ಹಲವು ಯೋಜನೆ ಜಾರಿಯನ್ನು ಉಲ್ಲೇಖಿಸಿದರು. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಫಲಾನುಭವಿ ಇದ್ದಾರೆ. ಅಂಥ ಫಲಾನುಭವಿಗಳನ್ನು ಗುರುತಿಸಿ ತಲುಪುವ ಕಾರ್ಯ ನಮ್ಮಿಂದ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದರು.

ಪಕ್ಷದ ಬೆನ್ನೆಲುಬಿನಂತೆ ಕೆಲಸ ಮಾಡಬೇಕು. ಸೀಟ್ ಹಂಚಿಕೆ ಬಳಿಕ ಸಣ್ಣಪುಟ್ಟ ಅಸಮಾಧಾನ ಇದ್ದರೆ ಅದನ್ನು ಶಮನಗೊಳಿಸಬೇಕು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ವಿಚಾರದಲ್ಲಿ ಹಿಂದೇಟು ಹಾಕಬಾರದು ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‍ನವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ನಾಯಕತ್ವ ಇಲ್ಲದೆ ಪರದಾಡುವ ಕಾಂಗ್ರೆಸ್ಸಿಗೆ ಭವಿಷ್ಯವೇ ಇಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ರಾಷ್ರ್ಟೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ಮೋದಿಜಿ ಮತ್ತು ಅವರ ಜನಪರ ಯೋಜನೆಗಳ ಕುರಿತು ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಪ್ರಮುಖರು ಭಾಗವಹಿಸಿದ್ದರು.




