ನವದೆಹಲಿ: 18: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಬೀಗುತ್ತಿರುವ ಭಾರತ ತನ್ನ ಮೂರನೇ ಪಂದ್ಯದಲ್ಲಿ ಇಂದು ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ.
ಟೂರ್ನಿಯಲ್ಲಿ ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತ, ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ಭಾರತ, ಇಂದಿನ ಪಂದ್ಯವನ್ನ ಗೆದ್ದು ಟೂರ್ನಿಯ ಮುಂದಿನ ಹಂತಕ್ಕೇರುವ ಲೆಕ್ಕಾಚಾರ ಹೊಂದಿದೆ.
ವಿಶ್ವದ ನಂ.2 ತಂಡವಾಗಿರುವ ಇಂಗ್ಲೆಂಡ್ ಕೂಡ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಅಗ್ರ ತಂಡವಾಗಿ ಗುರುತಿಸಿಕೊಂಡಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯಲಿದೆ. ಜಯದ ಅಲೆಯಲ್ಲಿರುವ ಎರಡು ತಂಡಗಳು ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹಣಾಹಣಿ ನಡೆಸಲು ತಯಾರಿ ಮಾಡಿಕೊಂಡಿವೆ. ಭಾರತದ ಪರ ರಿಚಾ ಘೋಷ್ ಭರ್ಜರಿ ಲಯದಲ್ಲಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಶೆಫಾಲಿ ವರ್ಮಾ ಕೂಡ ಉತ್ತಮ ಆಟವಾಡುವ ನಿರೀಕ್ಷೆ ಮೂಡಿಸಿದ್ದಾರೆ. ಇವರೊಂದಿಗೆ ಜೆಮೀಮಾ ರೋಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಸಹ ತಂಡಕ್ಕೆ ಆಸರೆಯಾಗಲಿದ್ದಾರೆ.

ಎರಡು ತಂಡಗಳ ನಡುವಿನ ಈವರೆಗಿನ ಹಣಾಹಣಿಯಲ್ಲಿ ಇಂಗ್ಲೆಂಡ್ ಪ್ರಾಬಲ್ಯ ಜೋರಾಗಿದೆ. ಈವರೆಗೂ 26 ಟಿ20 ಪಂದ್ಯದಲ್ಲಿ ಮುಖಾಮುಖಿ ಆಗಿದ್ದು, ಇದರಲ್ಲಿ ಭಾರತ 7 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ, ಇಂಗ್ಲೆಂಡ್ 19 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಇಂಗ್ಲೆಂಡ್ ವಿರುದ್ಧ ಈವರೆಗೂ ಗೆಲುವು ಸಾಧಿಸಿಲ್ಲ. ಆಡಿರುವ 5 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಜಯದ ನಗೆಬೀರಿದೆ.




