ಬೆಂಗಳೂರು.ಫೆ.18: ಕೋವಿಡ್- 19 ಸೋಂಕು ದೇಶದ ಜನರನ್ನು ಬಹಳಷ್ಟು ಬಾಧಿಸಿತು. ಲಕ್ಷಾಂತರ ಜನರು ನರಳಾಡಿದರು. ಕೋವಿಡ್ ಸಂದರ್ಭದಲ್ಲಿ ಸರಿಯಾದ ಆರೋಗ್ಯ ವ್ಯವಸ್ಥೆ ಸಿಗದೇ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಅನೇಕ ಕುಟುಂಬಗಳು ಬೀದಿಗೆ ಬಂದವು. ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಬಡವರು ಹೀಗೆ ಅನೇಕ ವರ್ಗದ ಜನರು ತುತ್ತು ಅನ್ನಕ್ಕಾಗಿ ಪರಿತಪಿಸಿದರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸೋತಿದ್ದವು. ಇದೀಗ ಚುನಾವಣೆ ಬರಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋವಿಡ್ ಫೈಲ್ಸ್ ಎಂಬ ಕಿರುಚಿತ್ರ ಮಾಡಲು ಮುಂದಾಗಿದ್ದಾರೆ. ಹಾಸ್ಯ ನಟ ಸಾಧುಕೋಕಿಲ ಅವರ ಜೊತೆಗೂಡಿ ಸಿನಿಮಾ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ಹಿಂದೆಯೇ ಡಿ.ಕೆ.ಶಿವಕುಮಾರ್ ಅವರು ಬಾಲಿವುಡ್ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೋವಿಡ್ ಫೈಲ್ಸ್ ಸಿನಿಮಾ ಮಾಡಲು ಮಾತುಕತೆ ಮಾಡಲಾಗಿತ್ತು. ಅದರ ರಿಜಿಸ್ಟ್ರೇಷನ್ ಸಹ ಮಾಡಿಸಿದ್ದರು. ಆದರೆ, ಬಜೆಟ್ ಜಾಸ್ತಿ ಆಗುತ್ತದೆ ಎಂಬ ಕಾರಣದಿಂದಾಗಿ ಹಿಂದೆ ಸರಿದಿದ್ದರು. ಇದೀಗ ಕಿರುಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕೋವಿಡ್ –19 ಕೆಲವರನ್ನು ನೇರವಾಗಿ ಕಾಡಿದರೆ, ಹಲವರನ್ನು ಪರೋಕ್ಷವಾಗಿ ಕಾಡಿತು. ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರತಿದಿನ ದುಡಿಯಲೇಬೇಕಿದ್ದ ಕೂಲಿ ಕಾರ್ಮಿಕರು, ಹಮಾಲರು, ಬೀದಿಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿ ಚಾಲಕರು, ತಳ್ಳುವ ಗಾಡಿಗಳ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಮಾಡುವವರು, ವಲಸೆ ಬಂದವರು, ಹೋಟೆಲ್ ಗಳಲ್ಲಿ ದುಡಿಯುವವರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಹೀಗೆ ಅನೇಕ ವರ್ಗದ ಜನರು ಬದುಕಿನ ಬಂಡಿಯನ್ನು ಸಾಗಿಸಲು ಪ್ರಯಾಸಪಟ್ಟರು. ಇಂತಹವರ ನೋವು ನಲಿವುಗಳನ್ನು ಮತ್ತು ಸರ್ಕಾರದ ಧೋರಣೆಯನ್ನು ಜನರಿಗೆ ಅರ್ಥ ಮಾಡಿಸುವ ಸಲುವಾಗಿ ಕಿರುಚಿತ್ರ ಮಾಡಲಾಗುತ್ತಿದೆ.

ಕೊರೋನ ಆವರಿಸಿದ ಮೇಲೆ ಕೈಗಾರಿಕೆ, ವಾಣಿಜ್ಯ, ಸಾರಿಗೆ ಮತ್ತು ಸಂಪರ್ಕ, ಮಾರುಕಟ್ಟೆ ಗಳ ಮೇಲೆ ತೀವ್ರ ಪರಿಣಾಮ ಬೀರಿತು. ಅದರಿಂದಾಗಿ ಜನರ ಜೀವನ ಮೇಲೆ ಸಹ ಬೆಲೆ ಏರಿಕೆ ತೀವ್ರತೆ ಹೆಚ್ಚಾಗಿದೆ. ಬಡವರು, ಕೂಲಿ ಕಾರ್ಮಿಕರು, ದಿನಕೂಲಿ ನೌಕರರು ಇಂದಿಗೂ ಸಹ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಜನರಿಗೆ ಬೆಂಬಲವಾಗಿ ನಿಲ್ಲಲಿಲ್ಲ ಎಂಬ ಆರೋಪಗಳನ್ನು ಹೊರಿಸುವ ಕಾಂಗ್ರೆಸ್ ಪಕ್ಷವು, ಅದನ್ನು ಜನರಿಗೆ ಮನಮುಟ್ಟುವಂತೆ ಹೇಳುವುದು ಅನಿವಾರ್ಯ ಎಂದಿದೆ.

ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮಗಳು, ಜನರ ಸಾವು ನೋವುಗಳು, ಆಕ್ಸಿಜನ್ ಗಾಗಿ ಪಟ್ಟ ಕಷ್ಟಗಳು, ಆಕ್ಸಿಜನ್ ಸಿಗದೇ ಪ್ರಾಣ ಬಿಟ್ಟ ಜೀವಗಳು, ಕೋವಿಡ್ ನಿಂದ ಸಂಕಷ್ಟಕ್ಕೊಳಗಾದವರ ಕಣ್ಣೀರಿನ ಕಥೆಗಳು, ನೊಂದವರ ನೋವುಗಳು ಎಲ್ಲವನ್ನೂ ಕೇಂದ್ರೀಕರಿಸಿ ಕಾಂಗ್ರೆಸ್ ಪಕ್ಷ ಕಿರುಚಿತ್ರ ನಿರ್ಮಾಣ ಮಾಡಲು ಮುಂದಾಗಿದೆ. ಡಿ.ಕೆ.ಶಿವಕುಮಾರ್ ಅವರು ಅದಕ್ಕೆ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.




