ಬೆಂಗಳೂರು :ಫೆ.18: ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ತಾರಕರತ್ನ ಇಹ ಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ ಚಿಕಿತ್ಸೆ ಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕರತ್ನ ಚಿತ್ತೂರಿನ ಕುಪ್ಪಂನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಹೃದಯಘಾತದ ಬಳಿಕ ಕೂಡಲೇ ಹತ್ತಿರದ ಆಸ್ಪತ್ರೆಗೆ ರವಾನಿಸಿ ನಂತರ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಅಂದಿನಿಂದ 23 ದಿನಗಳ ತನಕ ಚಿಕಿತ್ಸೆ ಮುಂದುವರಿದಿತ್ತು. ಆದರೆ ಚಿಕಿತ್ಸೆ ಗೆ ಸ್ಪಂಧಿಸದೇ ಮೃತಪಟ್ಟಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ ಅವರ ಆರೋಗ್ಯ ಸ್ಥಿತಿ ಪ್ರಾರಂಭದಿಂದಲೂ ಕ್ರಿಟಿಕಲ್ ಸ್ಟೇಜ್ ನಲ್ಲಿತ್ತು. ತಾರಕರತ್ನ ಅವರು ತೀವ್ರ ಹೃದಯಘಾತಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಹೃದಯದ ರಕ್ತ ನಾಳಗಳು ಬ್ಲಾಕ್ ಆಗಿದ್ದವು. ಇದ್ದರಿಂದ ತಾರಕರತ್ನ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆ್ಯಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿತ್ತು ಆದ್ರೆ, ಸ್ಟಂಟ್ ಅಳವಡಿಕೆ ನಡುವೆಯೂ ರಕ್ತಸ್ರಾವ ನಿಲ್ಲುತ್ತಿರಲಿಲ್ಲ ಎಂಬ ವರದಿಯನ್ನು ವೈದ್ಯರು ನೀಡಿದ್ದರು.. ನಿರಂತರ ಚಿಕಿತ್ಸೆ ನಡುವೆಯೂ ಚಿಕಿತ್ಸೆಗೆ ಸ್ಪಂಧಿಸದೇ ತಾರಕ್ ಇಹಲೋಕ ತ್ಯಜಿಸಿದ್ದಾರೆ. ಮೃತದೇಹವನ್ನ ಹೈದರಾಬಾದ್ ಗೆ ರವಾನಿಸಲು ಆಸ್ಪತ್ರೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನಾಳೆ ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ಮೃತ ದೇಹ ರವಾನಿಸಲಾಗುತ್ತದೆ. 20 ರಂದು ಅವರ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತೆಲುಗು ಫಿಲಂ ಚೇಂಬರ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಮವಾರ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶ್ವ ವಿಖ್ಯಾತ ನಟ ಸಾರ್ವಭೌಮ ನಂದಮೂರಿ ತಾರಕ ರಾಮರಾವ್ ಮೊಮ್ಮಗ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ವಿಶ್ವ ವಿಖ್ಯಾತ ನಟ ಸಾರ್ವಭೌಮ ನಂದಮೂರಿ ತಾರಕ ರಾಮರಾವ್ (ಎನ್ ಟಿಆರ್) ಅವರಿಗೆ ತಾರಕರತ್ನ ಮೊಮ್ಮಗ. ಎನ್ ಟಿಆರ್ ಅವರ ಪುತ್ರ ಮೋಹನ್ ಕೃಷ್ಣ ಅವರ ಪತ್ರ ತಾರಕರತ್ನ. ಅತ್ಯಂತ ಚಿಕ್ಕವಯಸ್ಸಿನಲ್ಲೇ (39) ಬಾರದ ಲೋಕಕ್ಕೆ ತೆರಳಿರುವುದು ನಂದಮೂರಿ ಅಭಿಮಾನಿಗಳು ಮತ್ತು ತೆಲುಗು ದೇಶಂ ಪಾರ್ಟಿಯ ಕಾರ್ಯಕರ್ತರಲ್ಲಿ ದುಖಃ ಹಿಮ್ಮಡಿಗೊಳಿಸಿದೆ.
ಪತ್ನಿ ಮತ್ತು ಮಗಳ..
ನಂದಮೂರಿ ತಾರಕರತ್ನ ಅವರ ಪತ್ನಿ ಅಲೆಖ್ಯಾ ರೆಡ್ಡಿ, ಮಗಳು ನಿಷ್ಕ. ಪತ್ನಿ ಅಲೆಖ್ಯಾ ರೆಡ್ಡಿ ಕಾಸ್ಟೋಮ್ ಡಿಸೈನರ್ ಆಗಿದ್ದಾರೆ. ತಾರಕರತ್ನ ಅವರ ‘ನಂದೀಶ್ವರ’ ಚಿತ್ರಕ್ಕೆ ಅಲೆಖ್ಯಾ ರೆಡ್ಡಿ ಅವರು ಕಾಸ್ಟೋಮ್ ಡಿಸೈನ್ ಮಾಡಿದ್ದರಂತೆ.
ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದ ತಾರಕರತ್ನ..
2002ರಲ್ಲಿ ಮೊದಲ ಬಾರಿಗೆ ತಾರಕರತ್ನ ಚಿತ್ರರಂಗ ಪ್ರವೇಶಿಸಿದ್ದರು. ನಾಯಕ ನಟನಾಗಿಯೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ.‘ಅಮರಾವತಿ’ ಸಿನಿಮಾದಲ್ಲಿ ಖಳನಾಯಕನಾಗಿ ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿ ರಾಷ್ಟ್ರಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ನಾಯಕ ನಟನಾಗಿ ‘ಒಕಟೋ ನಂಬರ್ ಕುರ್ರಾಡು’ ‘ಯುವರತ್ನ’ ‘ಭದ್ರಾದ್ರಿ ರಾಮುಡು’ ‘ನಂದೀಶ್ವರುಡು’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ತೆಲುಗು ಚಿತ್ರರಂಗಕ್ಕೆ ನೀಡಿದ್ದರು. ಆದರೆ ಇವರಿಗೆ ಚಿತ್ರರಂಗಕ್ಕಿಂತ ಹೆಚ್ಚು ರಾಜಕೀಯದತ್ತ ಒಲವಿತ್ತು.




