ಉಡುಪಿ:ಫೆ.20: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಡುಪಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ, ಉಡುಪಿಯ ಪೇಜಾವರ ಮಠದಲ್ಲಿ ಸಾಧು ಸಂತರ ಜತೆಗೆ ಮಾತುಕತೆ ನಡೆಸಿದರು. ಸಂತಸಮಾವೇಶದಲ್ಲಿ ಹಿಂದುಗಳ, ಹಿಂದು ಸಮುದಾಯದ ಹಿತಾಸಕ್ತಿ ಕಾಪಾಡುವಂತೆ ಸಾಧು, ಸಂತರು ಜೆ.ಪಿ.ನಡ್ಡಾ ಅವರನ್ನ ಆಗ್ರಹಿಸಿದರು.
ಸಾಧು, ಸಂತರ ಬೇಡಿಕೆಗಳು ಏನು..?
ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡುವ ವಿಚಾರಗಳೆಂದರೆ ಲವ್ ಜಿಹಾದ್, ಕೌ ಜಿಹಾದ್‌ಗಳು. ಇದು ಬಿಟ್ಟರೆ ಉಗ್ರಚಟುವಟಿಕೆಗಳಿಗೆ ಕರಾವಳಿ, ಮಲೆನಾಡಿನ ನೆಲವನ್ನು ಬಳಸಿಕೊಳ್ಳುವ ಪ್ರಯತ್ನ ತೀವ್ರಗೊಂಡಿರುವ ಕಾರಣ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಘಟಕವನ್ನು ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂದು ಸಾಧು ಸಂತರು ಆಗ್ರಹಿಸಿದ್ದಾರೆ.

- ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು.
- ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು.
- ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು.
- ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ ಔದ್ಯೋಗಿಕ ಪ್ರಗತಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.
- ತುಳು ಭಾಷೆಗೆ ಸೂಕ್ತ ಮಾನ್ಯತೆ ನೀಡಬೇಕು.
- ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯ ಜೊತೆಗೆ ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು.
- ಭ್ರಷ್ಟಾಚಾರ ಮುಕ್ತ , ಸ್ವಚ್ಛ , ಪಾರದರ್ಶಕ ಆಡಳಿತ ನೀಡಬೇಕು.
- ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು.
- ಉಡುಪಿ ಕಾರಿಡಾರ್ ಯೋಜನೆ

ಹೀಗೆ ಉಡುಪಿ ಅಭಿವೃದ್ಧಿಗೆ ಸಂಬಂಧಿಸಿದ ಹತ್ತು ಹಲವು ಯೋಜನೆಗಳ ವಿವರಗಳನ್ನು ಬೇಡಿಕೆಯಾಗಿ ಸಾಧು-ಸಂತರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದರು.




