Sania Mirza : ಟೆನಿಸ್‌ ಗೆ ವಿದಾಯ ಹೇಳಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ..!

ದುಬೈ:ಫೆ.22: ಭಾರತೀಯ ಟೆನಿಸ್‌ ಕ್ರೀಡಾ ಲೋಕದಲ್ಲಿ ಹೊಸ ಶಕೆ ಆರಂಭಿಸಿದ್ದ ಹೈದರಾಬಾದ್ ನ ಮೂಗುತಿ ಸುಂದರಿ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ತಮ್ಮ‌ ಕಲರ್ ಫುಲ್‌ ಕರಿಯರ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಸುದೀರ್ಘ 20 ವರ್ಷಗಳ‌ ಅದ್ಭುತ ವೃತ್ತಿ ಜೀವನ ಸೋಲಿನ ಕಹಿಯೊಂದಿಗೆ ಅಂತ್ಯಗೊಂಡಿದೆ.

ಮಹಿಳಾ ಟೆನಿಸ್ ಅಸೋಸಿಯೇಷನ್ (WTA) ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದ ಭಾರತದ ಸ್ಟಾರ್‌ ಆಟಗಾರ್ತಿ ಸಾನಿಯಾ, ಮೊದಲ ಸುತ್ತಿನಲ್ಲೇ ಸೋಲನ್ನು‌‌ ಎದುರಿಸಬೇಕಾಯಿತು.‌‌ ಇದರೊಂದಿಗೆ ಟೆನಿಸ್ ವೃತ್ತಿಬದಕನ್ನೂ ಕೊನೆಗೊಳಿಸಿದರು.

ಅಮೆರಿಕದ ಮ್ಯಾಡಿಸನ್ ಕೀಯ್ಸ್ ಜೊತೆಗೂಡಿ ತಮ್ಮ ಕೊನೆಯ ಪಂದ್ಯದಲ್ಲಿ ರಾಕೆಟ್ ಹಿಡಿದು ಗೆಲುವಿನ ಆತ್ನವಿಶ್ವಾಸದಲ್ಲಿ ಅಂಗಳಕ್ಕೆ ಇಳಿದಿದ್ದ ಸಾನಿಯಾ, ರಷ್ಯಾದ ವೆರೋನಿಕಾ‌ ಕುಡೆರ್ ಮೆಟೋವಾ ಮತ್ತು ಲಿಯುಡ್ಮಿಲಾ ಸಮ್ಸೋನೋವಾ ಜೋಡಿಯ ಎದುರು 4-6, 0-6 ನೇರ ಸೆಟ್ ಗಳಿಂದ ಪರಾಜಯಗೊಂಡರು.

ದುಬೈ ಟೆನಿಸ್ ಚಾಂಪಿಯನ್‌ಶಿಪ್ ನಂತರ ವಿದಾಯ ಹೇಳುವುದಾಗಿ ಟೂರ್ನಿಗೂ ಮುನ್ನವೇ ಹೇಳಿದ್ದರು. ಆದರೆ, ಲೆಜೆಂಡರಿ‌ ಆಟಗಾರ್ತಿ ಸಾನಿಯಾ ಅವರ ಅಮೋಘ ಟೆನಿಸ್ ವೃತ್ತಿಜೀವನ ಸೋಲಿನೊಂದಿಗೆ ಕೊನೆಗೊಂಡಿದ್ದು ದುಃಖಕರ‌ ಸಂಗತಿಯಾಗಿದೆ.

ಭಾರತೀಯ ಟೆನಿಸ್ ಲೋಕದಲ್ಲಿ ಅದೆಷ್ಟೋ ಯುವ ಕ್ರೀಡಾಪಟುಗಳಿಗೆ ಸಾನಿಯಾ ಪ್ರೇರಣೆಯಾಗಿದ್ದಾರೆ. 2003ರ‌ ವಿಂಬಲ್ಡನ್‌ ಚಾಂಪಿಯನ್‌ ಶಿಪ್‌ ಪ್ರಶಸ್ತಿ ಗೆದ್ದು ಎಲ್ಲರ ಗಮನ ಸೆಳೆದ ಸಾನಿಯಾ, ಭಾರತೀಯ ಟೆನಿಸ್ ಅನ್ನು ಉತ್ತುಂಗಕ್ಕೆ ಏರಿಸುವಲ್ಲಿ ಯಶಸ್ವಿಯಾದರು.

More News