State Highways : ರಾಜ್ಯ ಹೆದ್ದಾರಿಗಳ ಸುಧಾರಣೆ ಮತ್ತು ನವೀಕರಣಕ್ಕೆ ಬಿಡುಗಡೆಯಾದ ಹಣ ಸದ್ಬಳಕೆಯಾಗಿಲ್ಲ..!

ಬೆಂಗಳೂರು.ಫೆ:22: ಕಳೆದ ಆರು ವರ್ಷಗಳಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ಸುಧಾರಣೆ ಹಾಗೂ ನವೀಕರಣಕ್ಕಾಗಿ ಸರ್ಕಾರ 17,046.97 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ಹಣದ ಸದ್ಬಳಕೆಯಾಗಿಲ್ಲ. ಜೊತೆಗೆ ಕರ್ನಾಟಕದ ‘ರಸ್ತೆ ವಲಯ ನೀತಿ’ ಅನ್ವಯ ಎರಡು ಲೇನ್ (ದ್ವಿಪಥ) ರಸ್ತೆಗಳು ಇನ್ನೂ ಆಗಿಲ್ಲ ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ 2016-2021ರ ಅವಧಿಯ ಭಾರತೀಯ ಲೆಕ್ಕ ಪರಿಶೋಧಕರ ವರದಿ (ಸಿಎಜಿ) ವರದಿಯನ್ನು ಮಂಡಿಸಿದರು.

ಈ ರೀತಿ ರಸ್ತೆಯ ಜಾಲವನ್ನು ಅಭಿವೃದ್ಧಿ ಮಾಡದೇ ಇರುವುದು ಭಾರತೀಯ ರೋಡ್ ಕಾಂಗ್ರೆಸ್ (ಐ ಆರ್ ಸಿ) ನಿಯಮಾವಳಿಗಳ ಉಲ್ಲಂಘನೆಯೂ ಆಗಿದೆ ಎಂದು ವರದಿ ತಿಳಿಸಿದೆ. ಐಆರ್ಸಿನ ನಿಯಮಗಳು ಮತ್ತು ರಾಜ್ಯ ಸರ್ಕಾರದ ಸೂಚನೆಯ ಅನ್ವಯ ರಸ್ತೆ ಕಾಮಗಾರಿಗಳ ಅಂದಾಜು ವೆಚ್ಚವನ್ನು ತಯಾರಿಸಲಿಲ್ಲ. ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ. ರಸ್ತೆಗಳ ನಿರ್ಮಾಣ, ದುರಸ್ಥಿ ಇತ್ಯಾದಿಗಳಿಗೆ ತಯಾರಿಸಿದ ಅಂದಾಜು ವೆಚ್ಚವು ಬಹುದೊಡ್ಡ ನ್ಯೂನತೆಗಳಿಂದ ಕೂಡಿದೆ. ಇದರಿಂದ ಸರ್ಕಾರಕ್ಕೆ 38.63 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿಯಮಗಳ ಅನುಸಾರ ಗುತ್ತಿಗೆದಾರರು ಒಟ್ಟು 333 ಕ್ಷೇತ್ರೀಯ ಪ್ರಯೋಗ ಶಾಲೆಗಳನ್ನು ಸ್ಥಾಪಿಸಬೇಕಾಗಿತ್ತು. ಇದಕ್ಕಾಗಿ ಕರ್ನಾಟಕ ಸರ್ಕಾರ ಗುತ್ತಿಗೆದಾರರಿಗೆ ಈ ಆರು ವರ್ಷಗಳ ಅವಧಿಯಲ್ಲಿ 1,480.37 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಗುತ್ತಿಗೆದಾರರು ಇವನ್ನು ಸ್ಥಾಪಿಸಲಿಲ್ಲ. ಅಲ್ಲದೇ, ತಮ್ಮ ಬಿಲ್ಗಕಳನ್ನು ಸಲ್ಲಿಸುವಾಗ ಗುಣಮಟ್ಟ ನಿಯಂತ್ರಣ ಪರೀಕ್ಷಾ ವರದಿಗಳನ್ನು ಲಗತ್ತಿಸಿಲ್ಲ. ಈ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಸಂಬಂಧಿಸಿದ ಕಾರ್ಯಪಾಲಕ ಎಂಜಿನಿಯರ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಜಿ ಸಲಹೆ ಮಾಡಿದೆ.

ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಆಗುವ ನಷ್ಟವನ್ನು ತಪ್ಪಿಸಲು ಸರ್ಕಾರ ವಿಚಕ್ಷಕ ಸಂಸ್ಥೆಯಾಗಿ ಹೊಣೆಗಾರಿಕೆ ನಿಭಾಯಿಸಬೇಕು. ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ ಏಕೈಕ ಬಿಡ್ ಸ್ವೀಕರಿಸಿದ ಟೆಂಡರ್ ಅಂಗೀಕರಿಸುವ ಪ್ರಾಧಿಕಾರದ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂಬ ಮಹತ್ವದ ಶಿಫಾರಸುಗಳನ್ನು ಸರ್ಕಾರಕ್ಕೆ ಸಿಎಜಿ ಮಾಡಿದೆ.

More News