Actor Anant Nag : ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ನಟ ಅನಂತ್ ನಾಗ್ ಗೈರು..!

ಬೆಂಗಳೂರು :ಫೆ.22: ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಿಂದ ದಿಢೀರನೆ ಹಿಂದೆ ಸರಿದಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಆಗಬೇಕಿತ್ತಾದರೂ ಕಡೇ ಕ್ಷಣದಲ್ಲಿ ಗೈರಾಗಿದ್ದಾರೆ. ಈ ಮೂಲಕ ಬಿಜೆಪಿ ಸೇರ್ಪಡೆಯಿಂದ ದೂರ ಉಳಿದರಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಮುನಿರತ್ನ, ಡಾ.ಕೆ ಸುಧಾಕರ್ ಸಮ್ಮುಖದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ರೇಣುಕಾ ಪ್ರಸಾದ್, ಕಾಂಗ್ರೆಸ್ ಕೆಪಿಸಿಸಿ ಕಾರ್ಯದರ್ಶಿ ತುಳಸಿರಾಮ್, ಸಪ್ತಗಿರಿ ಶಂಕರ್ ನಾಯ್ಕ್ ಹಾಗೂ ನೆಲಮಂಗಲ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉಮೇಶ್ ಹಾಗೂ ಅನೇಕ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.

ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಈಗಾಗಲೇ ನಾವು ಗೆದ್ದಾಗಿದೆ. ಆತ್ಮವಿಶ್ವಾಸದಿಂದಲೇ ಹೇಳುತ್ತಿದ್ದೇವೆ, ಈ ಮೂರು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಇಂದು ಈ ಪಟ್ಟಿಗೆ ನೆಲಮಂಗಲವನ್ನೂ ಸೇರಿಸುತ್ತಿದ್ದೇವೆ. ಇಲ್ಲಿ ನಮ್ಮ ಗೆಲುವು ಖಚಿತ ಎಂದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಚಿವ ಮುನಿರತ್ನ, ನಾವು ಹಿಂದೆ ತೆಗೆದುಕೊಂಡ ನಿರ್ಧಾರ ನೀವು ತಡವಾಗಿ ತೆಗೆದುಕೊಂಡಿದ್ದೀರಿ. ಆದರೂ ಒಳ್ಳೆಯದಾಗಲಿದೆ. ನೆಮ್ಮದಿ, ಸಂತೋಷವಾಗಿರಬೇಕಾದಲ್ಲಿ ಬಿಜೆಪಿಗೆ ಬರಬೇಕು. ಬೇಧ, ಭಾವ ಇಲ್ಲದೆ ನೋಡಿಕೊಳ್ಳುತ್ತಾರೆ. ಇಂತಹ ಪ್ರೀತಿ, ಗೌರವ ಸಿಗುವುದು ಬಿಜೆಪಿಯಲ್ಲಿ ಮಾತ್ರ, ಸಣ್ಣ ಬೇಸರ, ಕಲ್ಮಷ ಇಲ್ಲದೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ.

ಈಗಾಗಲೇ ಕಾಂಗ್ರೆಸ್ ಮುಖಂಡರು ಗೆಲುವಿನ ಅಂಕಿ ಸಂಖೆಯ ಲೆಕ್ಕಾಚಾರದಲ್ಲಿ ಓಡಾಡುತ್ತಿದ್ದಾರೆ. ಆದರೆ ಎಲ್ಲಾ ಭಾಗ್ಯ ಕೊಟ್ಟು ಐದು ವರ್ಷ ಅಧಿಕಾರ ನಡೆಸಿ ಬಂದಿದ್ದು 87 ಸ್ಥಾನ. ಸಮ್ಮಿಶ್ರ ಸರ್ಕಾರ ಮಾಡಿ ಸ್ವಯಂಕೃತ ಅಪರಾಧ ಮಾಡಿದರು ಇದರಿಂದ 17 ಜನರನ್ನು ಕಳೆದುಕೊಂಡು 70ಕ್ಕೆ ಬಂದಿದ್ದಾರೆ. ಈಗ ಎಲ್ಲಿಂದ ಸರ್ಕಾರ ಮಾಡಲಿದ್ದಾರೆ. 60 ಸ್ಥಾನ ದಾಟಲ್ಲ, ಸರ್ಕಾರ ಮಾಡುವುದು ನಾವೇ, ಸೂರ್ಯ – ಚಂದ್ರ ಇರುವಷ್ಟೇ ಸತ್ಯ ಮತ್ತೆ ನಮ್ಮದೇ ಸರ್ಕಾರ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರೇ ಸಿಎಂ ಇರಲಿದ್ದಾರೆ ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ವಿಚಾರಧಾರೆಯಲ್ಲಿ ಕೆಲಸ ಮಾಡಿ ಬೇಸತ್ತು ನಿವೆಲ್ಲ ಇವತ್ತು ಬಿಜೆಪಿ ಸೇರ್ಪಡೆ ಆಗುತ್ತಿದ್ದೀರಾ, ಪರಿವಾರದಾರದಿಂದ ಸಂಘಟನಾಧಾರೆ ಕಡೆಗೆ ಬಂದಿದ್ದೀರಿ. ನೀವು ಈ ವೇದಿಕೆ ನೋಡಿದ್ರೆ ಗೊತ್ತಾಗುತ್ತೆ. ಸಚಿವ ಸುಧಾಕರ್, ಸಚಿವ ಮುನಿರತ್ನ ಹಾಗೂ ಲಕ್ಷ್ಮಿ ನಾರಾಯಣ್ ಎಷ್ಟು ಖುಷಿ ಇದಾರೆ ನೋಡಿ. ಒಂದು ವರ್ಷ ಆದ್ಮೇಲೆ ನೀವು ಇದೆ ರೀತಿ ಇರುತ್ತೀರಾ. ನಮ್ಮ ಪಕ್ಷ ಜಾತಿ, ನಾಯಕರಿಂದ ಅಲ್ಲ, ಕಾರ್ಯಕರ್ತರಿಂದ. ನಮ್ಮ ಪಕ್ಷದಲ್ಲಿ ಯಾವುದೇ ನಾಯಕತ್ವ ಮೇಲೆ ಇಲ್ಲ ಕಾರ್ಯಕರ್ತರ ಮೇಲೆ ಬಿಜೆಪಿ ಪಕ್ಷ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್, ವಲಸಿಗರು ಎನ್ನುವ ರೀತಿ ಇದೆ. ಆದರೆ ನಮ್ಮ ಪಕ್ಷದಲ್ಲಿ ಹೊಸಬರು ಹಳಬರು ಎನ್ನುವ ಸಂಪ್ರಾದಾಯ ಇಲ್ಲ. ಮುಂದಿನ ಭಾರಿ ನಾವು 150ಕ್ಕೂ ಹೆಚ್ಚು ಸ್ಥಾನ ಪಡೆಯುತ್ತೇವೆ. ಇವತ್ತು ಬಿಜೆಪಿ ಸೇರಿದ ನಿಮ್ಮನ್ನು ಪಕ್ಷ ಯಾವತ್ತೂ ಕೈ ಬಿಡಲ್ಲ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು.

More News