ಬೆಂಗಳೂರು : ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೊಡುವುದು ಬಿಡುವುದು ನಮ್ಮ ಪಕ್ಷದ ಆಂತರಿಕ ವಿಚಾರ. ಅವರಿಗೆ ಟಿಕೆಟ್ ಕೊಡಿ, ಇವರಿಗೆ ಟಿಕೆಟ್ ಕೊಡಿ ಎಂದು ಹೇಳಲು ಸಿದ್ದರಾಮಯ್ಯ ಯಾರು? ಹೂ ಈಸ್ ಸಿದ್ದರಾಮಯ್ಯ? ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಯಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಇದು ನಮ್ಮ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಇದು ನಮ್ಮ ನಿಲುವೂ ಕೂಡ. ಈ ಉಸಾಬರಿ ಸಿದ್ದರಾಮಯ್ಯ ಅವರಿಗೆ ಯಾಕೆ ಎನ್ನುವುದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಅಭ್ಯರ್ಥಿ ಹಾಕಿದರೆ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಅಂತ ಆರೋಪ ಮಾಡುತ್ತಾರೆ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ ಅನ್ನುತ್ತಾರೆ. ಓಬಿಸಿ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಹೊರಟಿದ್ದಾರೆ ಎನ್ನುತ್ತಾರೆ. ಹಾಗಾದರೆ ನಾವು ಯಾರನ್ನು ಅಭ್ಯರ್ಥಿ ಮಾಡಬೇಕು? ಪ್ರತಿಯೊಂದಕ್ಕೂ ಈ ದೊಣ್ಣೆ ನಾಯಕನ ಅಪ್ಪಣೆ ಪಡೆಯಬೇಕೆ? ಬೇರೆಯವರ ಮರ್ಜಿಗೆ ತಕ್ಕಂತೆ ನಾವು ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕೆ? ಎಂದಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕೇಳಿಕೊಂಡು ಟಿಕೆಟ್ ಕೊಡಬೇಕಾ? ಯಾರನ್ನು ಅಭ್ಯರ್ಥಿ ಮಾಡಬೇಕು? ಮಾಡಬಾರದು? ಎನ್ನುವುದು ನಮ್ಮ ವಿವೇಚನೆ. ನಮಗೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಯಾರು ಎನ್ನುವುದು ಮತ್ತೆ ಮತ್ತೆ ನಾನು ಕೇಳುವ ಪ್ರಶ್ನೆಯಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಎಲ್ಲರಿಗಿಂತ ಮೊದಲೇ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಸ್ವಂತ ಅಭ್ಯರ್ಥಿಗಳ ದಿಕ್ಕಿಲ್ಲ. ಇನ್ನೂ ಮೀನಾಮೇಷ ಎಣಿಸುತ್ತಿವೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧಹರಿಹಾಯ್ದರು.
ಜಾತಿ ರಾಜಕೀಯ ಮಾಡಬಾರದು ಅಂತ ಅದೇ ಕಾಂಗ್ರೆಸ್ ಪಕ್ಷದವರೇ ಹೇಳುತ್ತಾರೆ. ಇವರು ನೋಡಿದರೆ ಮಾಡೋದು ಜಾತಿ ರಾಜಕೀಯವನ್ನೇ. ಒಕ್ಕಲಿಗ ಸಮುದಾಯದವರು ನಮ್ಮನ್ನು ಕೈ ಬಿಡೋದಿಲ್ಲ. ಇದು ಅವರಿಗೆ ಗೊತ್ತಿರಲಿ. ಈಗ ಮತ್ತೆ ನಮ್ಮ ಸಮುದಾಯದ ನಾಯಕರನ್ನು ಹೈಜಾಕ್ ಮಾಡಲು ಹೊರಟಿದ್ದಾರಲ್ಲ? ಅದನ್ನು ಏನಂತಾರೆ? ಅದು ಯಾವ ಸೀಮೆ ರಾಜಕೀಯ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 38-40 ಸೀಟಿಗೆ ಬಂದು ನಿಲ್ಲುತ್ತದೆ.
ಎತ್ತಿನ ಹೊಳೆ ಯೋಜನೆಯಲ್ಲಿ ಯಾರ ಕಿಸೆಗೆ ಹಣ
ನಮ್ಮ ಸರಕಾರ ಬಂದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುತ್ತೇವೆ ಎಂದು ಮತ್ತೆ ಬರುಡೆ ಬಿಡುತ್ತಿದ್ದಾರೆ. ಇಷ್ಟು ದಿನ ಹರಿದ ನೀರೆಲ್ಲಿ? ಎತ್ತಿನಹೊಳೆ ಯೋಜನೆ 8 ಸಾವಿರದಿಂದ ಈಗ 24 ಸಾವಿರ ಕೋಟಿಗೆ ಹೋಗಿದೆ. ಈ ಯೋಜನೆ ಹೆಸರಿನಲ್ಲಿ ಯಾರ ಕಿಸೆ ತುಂಬಿಸಿದ್ದೀರಿ ಸಿದ್ದರಾಮಯ್ಯನವರೇ? ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿದ್ದೇನೆ ಅಂತಾರೆ. ನೀವೇನು ಮಾಡಿದ್ದೀರಿ? ಎಲ್ಲವೂ ಜನರಿಗೆ ಗೊತ್ತಿದೆ ಎಂದು ಖಾರವಾಗಿ ಪ್ರತಿಕ್ರಯಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರದ್ದು, ನಾಯಕರ ಪಕ್ಷವಲ್ಲ
ಯಾರೋ ಕೆಲವರು ಪಕ್ಷ ಬಿಟ್ಟು ಹೋದರು ಎಂಬ ಕಾರಣಕ್ಕೆ ನನಗಾಗಲಿ, ಜೆಡಿಎಸ್ ಪಕ್ಷಕ್ಕಾಗಲಿ ಶಾಕ್ ಆಗಿಲ್ಲ. ಆಗುವುದೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು. ಮೈಸೂರಿನವರೊಬ್ಬರು ಬಿಜೆಪಿಗೆ ಸೇರಲು ಅರ್ಜಿ ಹಾಕಿಕೊಂಡಿದ್ದಾರಂತೆ. ಸೇರಿಕೊಳ್ಳಲಿ. ನಮ್ಮದೇನೂ ತಕರಾರಿಲ್ಲ. ಪಾಪ, ಅವರು ಔದಾರ್ಯದಿಂದ ಜನವರಿ ತಿಂಗಳವರೆಗೂ ಜೆಡಿಎಸ್ ಪಕ್ಷದಲ್ಲೇ ಇರುತ್ತಾರಂತೆ. ಹಿಂದೆ ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತು ಸುಣ್ಣವಾಗಿದ್ದರು. ಕಳೆದ ಬಾರಿ ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ಗೆದ್ದು ವಿಧಾನ ಪರಿಷತ್ ಸದಸ್ಯರಾಗಿದ್ದರು. ಪರಿಷತ್ ಸ್ಥಾನ ಉಳಿಸಿಕೊಳ್ಳಲು ಇನ್ನೂ ಪಕ್ಷದಲ್ಲೇ ಇದ್ದಾರೆ ಅಷ್ಟೇ ಎಂದು ಹೆಸರನ್ನೂ ಹೇಳದೇ ಸಂದೇಶ್ ನಾಗರಾಜ್ ವಿರುದ್ಧ ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ಇನ್ನು ಕೋಲಾರದವರೊಬ್ಬರೂ ಪಕ್ಷ ಬಿಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಹೋಗಬೇಕು ಎಂದುಕೊಂಡವರೆಲ್ಲ ಹೋಗಲಿ. ನಮ್ಮದೇನೂ ತಕರಾರೂ ಇಲ್ಲ. ಅವರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವೂ ಆಗಿಲ್ಲ ಎಂದು ಶಾಸಕ ಶ್ರೀನಿವಾಸ ಗೌಡ ವಿರುದ್ಧ ಕೂಡ ಅವರು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷವನ್ನು ʼಬಿಜೆಪಿ ಬಿ ಟೀಮ್ʼ ಎಂದು ಜರೆಯುವುದು ಕೆಲವರಿಗೆ ಚಾಳಿ. ಪದೇಪದೆ ಹೀಗೆ ಟೀಕಿಸುವ ನಾಯಕರು ಸಮ್ಮಿಶ್ರ ಸರಕಾರ ರಚನೆ ಮಾಡಲು ನಮ್ಮ ಮನೆ ಬಾಗಿಲಿಗೆ ಯಾಕೆ ಬಂದಿದ್ದರು? ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸೀಟು ಗೆದ್ದಿರುವ ನಮ್ಮ ಪಕ್ಷದ ಸುತ್ತ ಯಾಕೆ ಗಿರಕಿ ಹೊಡೆಯುತ್ತಿದ್ದಾರೆ? ಇದರ ಬಗ್ಗೆ ಅವರು ಯಾಕೆ ಮಾತನಾಡುವುದಿಲ್ಲ? ಬಿಜೆಪಿ ಅಧಿಕಾರಕ್ಕೆ ಬರಲು ಯಾರು ಕಾರಣ? ಈ ದರಿದ್ರ ಸರಕಾರ ಬರಲು ಯಾರು ಮುಖ್ಯ ಕಾರಣ? ಎಂದು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ನೌಕರನ ಪತ್ನಿ, ಮಕ್ಕಳ ಆತ್ಮಹತ್ಯೆಗೆ ಹೆಚ್ಡಿಕೆ ನೋವು
ನೆಲಮಂಗಲದ ಬಿಎಂಟಿಸಿ ಚಾಲಕ-ನಿರ್ವಾಹಕರೊಬ್ಬರ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿದೆ. ಕರ್ತವ್ಯದಲ್ಲಿದ್ದಾಗಲೇ ಸಾರಿಗೆ ಸಂಸ್ಥೆ ನೌಕರ ಕೋವಿಡ್ ಕಾರಣಕ್ಕೆ ಸಾವನ್ನಪ್ಪಿದ್ದಾನೆ. ಸರಕಾರ ಸಕಾಲಕ್ಕೆ ಪರಿಹಾರ ನೀಡದ ಹಾಗೂ ನೈತಿಕ ಸ್ಥೈರ್ಯ ತುಂಬದ ಕಾರಣಕ್ಕೆ ಆತನ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹೃದಯವಿದ್ರಾವಕ ಘಟನೆ. ಈ ಕುಟುಂಬಕ್ಕೆ ಸರಕಾರ ನೆರವಾಗಲಿಲ್ಲ ಯಾಕೆ? ಇದೊಂದು ದರಿದ್ರ ಸರಕಾರ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟದಲ್ಲಿರುವ ಇಂಥ ಜನರಿಗೆ ನೆರವು ನೀಡಲು ಸರಕಾರಕ್ಕೆ ಏನು ಕಾಯಿಲೆ? ಇಡೀ ಕುಟುಂಬವನ್ನೇ ಇವತ್ತು ಸರಕಾರ ಬಲಿ ತೆಗೆದುಕೊಂಡಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪುಟಗಟ್ಟಲೇ ಜಾಹಿರಾತು ಕೊಡುವುದಕ್ಕೆ ಹಣವಿದೆ. ಇಂಥ ನತದೃಷ್ಟರಿಗೆ ನೆರವಾಗಲು ಹಣವಿಲ್ಲವೇ? ಎಂದು ಅವರು ಪ್ರಶ್ನಿಸಿದರು.




