ನಗ್ನ ಚಿತ್ರದ ಮೊಬೈಲ್ ಸ್ಕ್ರೀನ್ ಶಾರ್ಟ್: ಇದು ಎಡಿಟೆಡ್ ಫೋಟೋ ಎಂದು ದೂರಿದ ಸಿಂಧೂರಿ ಪತಿ
ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪಗಳ ಸುರಿಮಳೆ ಗೈದಿದ್ದ ರೂಪಾ, ಅನೇಕ ಫೋಟೋ ಪ್ರಸಂಗ ತೆರೆದಿಟ್ಟಿದ್ರು. ಇದು ರೋಹಿಣಿ ಸಿಂಧೂರಿ ಅಸಲಿ ರೂಪ ಎಂದು ಆರೋಪಿಸಿದ್ರು. ಸಿಂಧೂರಿ ಯವರ ಫೋಟೋಗಳನ್ನು ಹಾಗೂ ಕೆಲ ಸ್ಕ್ರೀನ್ ಶಾರ್ಟ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ಇದರಲ್ಲಿ ನಗ್ನ ರಹಸ್ಯವಿದೆ ಎಂದು ಆರೋಪಿಸಿದ್ದರು. ಆದರೀಗ ರೂಪ ಹಾಕಿದ ಪೋಸ್ಟ್ ನ ಅಸಲಿಯತ್ತೇ ಬೇರೆ ಎಂದು ರೋಹಿಣಿ ಸಿಂಧೂರಿ ಪತಿ ಹೇಳಿದ್ದಾರೆ.

ಐಪಿಎಸ್ ಅಧಿಕಾರಿ ರೂಪಾ- ಸಿಂಧೂರಿ ನಡುವಿನ ಕಾಳಗದಲ್ಲಿ ಸಿಂಧೂರಿ ಪತಿ ಎಂಟ್ರಿ ಕೊಟ್ಟಿದ್ದಾರೆ. ನನ್ನ ಧರ್ಮ ಪತ್ನಿ ರೋಹಿಣಿ ಸಿಂಧೂರಿ ತೇಜೋವಧೆಗೆ ರೂಪಾ ಇಳಿದಿದ್ದಾರೆ ಎಂದು ಆರೋಪಿಸಿದ್ದು, ನಗ್ನ ಚಿತ್ರ ಕಳಿಸಿದ್ದಾರೆಂದು ಎಡಿಟ್ ಮಾಡಿದ ಮೊಬೈಲ್ ಸ್ಕ್ರೀನ್ ಶಾರ್ಟ್ ಅಪ್ಲೋಡ್ ಮಾಡಿ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

ಇನ್ನೂ ನಗ್ನ ವೀಡಿಯೋ ರೋಹಿಣಿ ಕಳಿಸಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಪತಿ ಸುಧೀರ್ ರೆಡ್ಡಿ,
ವೈಯಕ್ತಿಕ ಫೋಟೋಗಳನ್ನು ಸಿಂಧೂ ಯಾರಿಗೋ ಕಳಿಸಿದ್ದಾರೆ ಎಂದು ಆರೋಪಿಸಿ ಸ್ಕ್ರೀನ್ ಶಾರ್ಟ್ ಶೇರ್ ಮಾಡಿದ್ದರು. ನಂಬರ್ ಸೇವ್ ಆಗಿರೋದನ್ನು ನೋಡಿದ್ರೆನೇ ಗೊತ್ತಾಗುತ್ತೆ. ನಿಜವಾಗಿಯೂ ರೋಹಿಣಿ ಸಿಂಧೂರಿದು ಎಡಿಟೆಡ್ ಫೋಟೋ.. ಫೋಟೋ ವನ್ನು ಎಡಿಟ್ ಮಾಡಿ ಸಿಂಧೂ ನಂಬರ್ ಹಾಕಿದ್ದಾರೆ ಎಂದು ದೂರಿದ್ದಾರೆ.

ನಂಬರ್ ಮೊಬೈಲ್ ನಲ್ಲಿ ಸೇವ್ ಆಗದಿದ್ರೆ ನಂಬರ್ ನ ಮುಂದೆ 91+ ಎಂದು ತೋರಿಸಬೇಕಿತ್ತು. ಆದರೆ ಯಾವುದೋ ಚಾಟ್ ಗೆ ನನ್ನ ಪತ್ನಿ ನಂಬರ್ ಹಾಕಿ ರೂಪಾ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಯಾರದ್ದೋ ಹೆಸರಿರುವ ಜಾಗದಲ್ಲಿ ರೋಹಿಣಿ ನಂಬರ್ ಹಾಕಿ ಸೇವ್ ಮಾಡಲಾಗಿದೆ. ನಂತರ ಡಿಲೀಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಅವರು ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ. ನನ್ನ ಧರ್ಮಪತ್ನಿಗೆ ಅವಮಾನ ಆಗುವ ರೀತಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ಇಲ್ಲಿಗೆ ನಿಲ್ಲಿಸಲಾರೆ ಎಂದು ತಿಳಿಸಿದರು.




