ಬೆಂಗಳೂರು : ಪ್ರಜಾಧ್ವನಿಯಾತ್ರೆ ಸಂದರ್ಭದಲ್ಲಿ ಜನರು ನೀವು ಅಧಿಕಾರಕ್ಕೆ ಬಂದರೆ ಅಕ್ಕಿ ಪ್ರಮಾಣ ಹೆಚ್ಚಿಸಿ ಎಂದು ಕೇಳಿದರು. ಅದಕ್ಕೆ ನಮ್ಮ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ತಲಾ 10 ಕೆ.ಜಿಯಂತೆ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ನೀಡಲು ಪಕ್ಷ ತೀರ್ಮಾನಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ಮೂರನೇ ಗ್ಯಾರಂಟಿ ಯೋಜನೆಯಾಗಿ ಘೋಷಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ದೇಶದ ಬಡವರಿಗೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು 3 ರೂ. ಬೆಲೆಯಲ್ಲಿ ಅಕ್ಕಿ ನೀಡಲು ನಿರ್ಧರಿಸಿತು. ನಂತರ 2013ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದೆವು.
ನಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ಈ ಯೋಜನೆ ಜಾರಿ ಮಾಡಿದೆವು. ಆರಂಭದಲ್ಲಿ ಪ್ರತಿ ಕೆ.ಜಿಗೆ 1 ರೂ. ನಂತೆ 5 ಕೆ.ಜಿ ಅಕ್ಕಿಯಂತೆ ಒಟ್ಟು 30 ಕೆ.ಜಿ ಅಕ್ಕಿ ನೀಡಲಾಗುತ್ತಿತ್ತು. ನಂತರ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆವು.
ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದನ್ನು ಮತ್ತೆ 5 ಕೆ.ಜಿಗೆ ಇಳಿಸಿದೆ. ನಾನು ಈ ತೀರ್ಮಾನ ಬೇಡ, ಎಂದು ಸದನದ ಒಳಗೆ ಹಾಗೂ ಹೊರಗೆ ಸರ್ಕಾರಕ್ಕೆ ಆಗ್ರಹ ಮಾಡಿದ್ದೆವು. ಕೋವಿಡ್ ಕಾಲದಲ್ಲಿ ನಮ್ಮ ಉಚಿತ ಅಕ್ಕಿ ಹಾಗೂ ನರೇಗಾ ಕಾರ್ಯಕ್ರಮಗಳು ಜನರ ಬದುಕಿಗೆ ಆಸರೆಯಾಗಿತ್ತು. ಆದರೆ ಈ ಸರ್ಕಾರದ ತೀರ್ಮಾನ ಜನರಿಗೆ ನೋವು ತಂದಿದೆ.
ನಾವು ಪ್ರಜಾಧ್ವನಿಯಾತ್ರೆ ಸಂದರ್ಭದಲ್ಲಿ ಜನರು ನೀವು ಅಧಿಕಾರಕ್ಕೆ ಬಂದರೆ ಅಕ್ಕಿ ಪ್ರಮಾಣ ಹೆಚ್ಚಿಸಿ ಎಂದು ಕೇಳಿದರು. ನಂತರ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ತಲಾ 10 ಕೆ.ಜಿಯಂತೆ ಬಿಪಿಎಲ್ ಕಾರ್ಡುದಾರರಿಗೆ ನೀಡಲು ಪಕ್ಷ ತೀರ್ಮಾನಿಸಿದೆ. ಈ ಯೋಜನೆಯನ್ನು ಪಕ್ಷದ ಮೂರನೇ ಗ್ಯಾರಂಟಿ ಯೋಜನೆಯಾಗಿ ಘೋಷಿಸುತ್ತಿದ್ದೇವೆ.
ಬಿಜೆಪಿ ಸರ್ಕಾರದ ಸುಳ್ಳಿನಿಂದ ಬೇಸತ್ತಿರುವ ಜನ ಯಾರನ್ನು ನಂಬಬೇಕು ಎಂದು ತೋಚುತ್ತಿಲ್ಲ. ಹೀಗಾಗಿ ನಮ್ಮ ಯೋಜನೆಯನ್ನು ನಾವು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಲು ಗ್ಯಾರಂಟಿ ಕಾರ್ಡ್ ಅನ್ನು ಪ್ರತಿ ಮನೆಗೂ ನೀಡುತ್ತಿದ್ದೇವೆ.

ಈಗ ಅಕ್ಕಿ ನೀಡಲು 4-5 ಸಾವಿರ ಕೋಟಿ ಖರ್ಚಾಗುತ್ತಿದ್ದು, ಈಗ 10 ಕೆ.ಜಿ ಹೆಚ್ಚಾಗುವುದರಿಂದ ಹೆಚ್ಚುವರಿಯಾಗಿ 3-4 ಸಾವಿರ ಕೋಟಿ ಹೆಚ್ಚು ವೆಚ್ಚ ತಗುಲಬಹುದು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು, ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಉದ್ದೇಶ.
ಬೊಮ್ಮಾಯಿ ಅವರು ಇದು ಸಿದ್ದರಾಮಯ್ಯ ಅವರ ಕಾರ್ಯಕ್ರಮ ಅಲ್ಲ ಮೋದಿ ಕಾರ್ಯಕ್ರಮ ಎನ್ನುತ್ತಿದ್ದಾರೆ. ಇದು ಮೋದಿ ಅವರ ಕಾರ್ಯಕ್ರಮವಾದರೆ ಗುಜರಾತ್, ಉತ್ತರ ಪ್ರದೇಶ ದಲ್ಲಿ ಉಚಿತ ಅಕ್ಕಿ ನೀಡುತ್ತಿಲ್ಲ ಯಾಕೆ? ಇನ್ನು ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಮೋದಿ ಅವರು ಜಾರಿಗೆ ತಂದರಾ? ಇವರು ಸುಳ್ಳನ್ನು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಇದಕ್ಕಾಗಿಯೇ ಆರ್ ಎಸ್ ಎಸ್ ನವರು ಇವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.




