ಬೆಂಗಳೂರು. ಫೆ.27: ಬಾಲಿವುಡ್ ನಲ್ಲಿ ಬಹಳಷ್ಟು ಹೆಸರು ಮಾಡಿರುವ ನಟಿ ಶಿಲ್ಪಾ ಶೆಟ್ಟಿ ಸರಿಸುಮಾರು ಹದಿನೇಳು ವರ್ಷಗಳ ನಂತರ ಕನ್ನಡ ಸಿನಿಮಾ ರಂಗಕ್ಕೆ ಕಾಲಿಡಿತ್ತಿದ್ದು, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ತಾರಾಗಣದಲ್ಲಿ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಂಜಯ್ ದತ್ ಎಂಟ್ರಿಕೊಡುವ ಮೂಲಕ ಈಗಾಗಲೇ ಸಿನಿಮಾದ ಸ್ಟಾರ್ ಕಾಸ್ಟ್ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇದೀಗ ಈ ಟೀಂ ಜೊತೆಗೆ ಬಾಲಿವುಡ್ ನಟಿ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿರುವುದು ಭಾರೀ ಕ್ರೇಜ್ ಹುಟ್ಟಿಸಿದೆ.
ಮಂಗಳೂರು ಮೂಲದವರಾದ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಬಾಜಿಗರ್ ಚಿತ್ರದಿಂದ ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ ಶಿಲ್ಪಾ ಶೆಟ್ಟಿ ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಉಪೇಂದ್ರ ಅವರ ಆಟೋ ಶಂಕರ್ ಇವರ ಕೊನೆಯ ಸಿನಿಮಾ ಆಗಿದೆ. ಇದೀಗ 17 ವರ್ಷಗಳಾದ ಮೇಲೆ ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಅಭಿನಯಿಸಲು ಒಕೆ ಮಾಡಿದ್ದು, ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾವಾಗುತ್ತಿರುವ ಭಾರೀ ಬಜೆಟ್ ನ ಸಿನಿಮಾ ಕೆಡಿ ಈಗಾಗಲೇ ಟೈಟಲ್ ನಿಂದಲೇ ಸಂಚಲನ ಸೃಷ್ಟಿಸಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಮಾಡಲು ಚಿಂತನೆ ನಡೆದಿದ್ದು, ಅದಕ್ಕೆ ಸೂಕ್ತವಾದ ನಟರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಿನಿಮಾ 60-70 ರ ದಶಕದ ಕತೆಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ, ಆ ಕಾಲಘಟ್ಟವನ್ನು ಕಟ್ಟಿಕೊಡುವ ಸಲುವಾಗಿ ಚಿತ್ರತಂಡ ಶ್ರಮಿಸುತ್ತಿದೆ.

ಸಿನಿಮಾ ಅನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಕೆಜಿಎಫ್ 2 ನಲ್ಲಿ ಅಧೀರ ಆಗಿ ಅಬ್ಬರಿಸಿರುವ ಸಂಜು ಬಾಬಾ ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಉಳಿದಂತೆ ಪ್ರೇಮ್ ತಮ್ಮ ಸಿನಿಮಾಗಳಿಗೆ ಪರಭಾಷಾ ಕಲಾವಿದರನ್ನು ಸೆಳೆಯುವ ಕೆಲಸವನ್ನು ಅನೇಕ ದಿನಗಳಿಂದಲೂ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಶೇಷ ಹಾಡುಗಳಿಗೆ ಬಾಲಿವುಡ್ ನಲ್ಲಿ ಮಿಂಚಿದವರನ್ನು ಆಹ್ವಾನಿಸಿದ್ದಾರೆ. ಇನ್ನೂ ವಿಲನ್ ರೋಲ್‌ಗೆ ಸಂಜಯ್ ದತ್‌ನ ಅಖಾಡಕ್ಕೆ ಇಳಿಸಲಿದ್ದಾರೆ ಎನ್ನಲಾಗಿದೆ.




