ಮುಂಬೈ : ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಎನ್ ಸಿ ಬಿ ಬಲೆಗೆ ಬಿದ್ದಿದ್ದಾರೆ. ಹಾಗೆಯೇ ಈತನೊಂದಿಗೆ ಪಾರ್ಟಿಯಲ್ಲಿದ್ದ ಎಂಟು ಜನರನ್ನು ವಶಕ್ಕೆ ಪಡೆದಿರುವ ಎನ್ ಸಿ ಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಎಂಟು ಜನರಲ್ಲಿ ಇಬ್ಬರು ಹುಡುಗಿಯರು ಸೇರಿದ್ದಾರೆ.
ಮುಂಬೈನ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಶನಿವಾರ ರಾತ್ರಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಪಡೆದ ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಬಾಲಿವುಡ್ನ ಒಬ್ಬ ಸ್ಟಾರ್ ನಟನ ಮಗನನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿತ್ತು. ಆದರೆ ಅದು ಈಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಹೇಳಲಾಗುತ್ತಿದೆ.
ಆರ್ಯನ್ ಖಾನ್ ಮೊಬೈಲ್ ಫೋನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿನ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಡ್ರಗ್ಸ್ ಪಾರ್ಟಿ ಆಯೋಜಕರ ಜೊತೆ ಆರ್ಯನ್ ಯಾವ ರೀತಿ ಸಂಪರ್ಕ ಹೊಂದಿದ್ದರು ಎನ್ನುವುದರ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈವರೆಗೂ ಆರ್ಯನ್ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಎಷ್ಟು ಪ್ರಮಾಣದಲ್ಲಿ ಡ್ರಗ್ಸ್ ದೊರಕಿದೆ ಎನ್ನುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಉ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಆರ್ಯನ್ ಮಾತ್ರವಲ್ಲದೇ ಮತ್ತೋರ್ವ ಸ್ಟಾರ್ ನಟನ ಪುತ್ರ ಕೂಡ ಈ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ ಎನ್ನುವುದರ ಕುರಿತು ಮಾಹಿತಿ ಕೇಳಿ ಬರುತ್ತಿದೆ. ಆದರೆ ಅವರು ಯಾರು ಎನ್ನುವುದರ ಕುರಿತು ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.