IND v/s AUS: ಆಸೀಸ್‌ ಬ್ಯಾಟರ್‌ಗಳ ವಿರುದ್ಧ ಮುಂದುವರಿದ ಜಡೇಜಾ ಪ್ರಾಬಲ್ಯ

ಬೆಂಗಳೂರು.ಮಾ.2: ಟೀಂ ಇಂಡಿಯಾದ ಸ್ಟಾರ್‌ ಆಲ್ರೌಂಡರ್‌ ರವೀಂದ್ರ ಜಡೇಜಾ ತಮ್ಮ ಶ್ರೇಷ್ಠ ಬೌಲಿಂಗ್‌ ಮೂಲಕ ಪ್ರವಾಸಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಾಬಲ್ಯ ಮುಂದುವರಿಸಿದ್ದಾರೆ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲೂ ಮಿಂಚಿದ್ದ ಜಡೇಜಾ, ಇಂಧೋರ್‌ ಟೆಸ್ಟ್‌ನಲ್ಲೂ ಸ್ಪಿನ್‌ ಕರಾಮತ್ತು ತೋರಿಸಿದ್ದಾರೆ. 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್‌ ದಾಳಿ ನಡೆಸಿರುವ ರವೀಂದ್ರ ಜಡೇಜಾ, ಪ್ರಮುಖ 4 ವಿಕೆಟ್‌ ಪಡೆಯುವ ಮೂಲಕ ಭಾರತದ ಪರ ಯಶಸ್ವಿ ಬೌಲರ್‌ ಎನಿಸಿದ್ದಾರೆ. ಪರಿಣಾಮ ಆಸೀಸ್‌ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 156 ರನ್‌ಗಳಿಸಿದೆ.

ಕಾಂಗರೂ ಪಡೆಯ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ಸೇರಿದಂತೆ ಪ್ರಮುಖ ಬ್ಯಾಟರ್‌ಗಳಾದ ಲಬುಶೇನ್‌, ಸ್ಟೀವ್‌ ಸ್ಮಿತ್‌ ಹಾಗೂ ಖವಾಜ ಅವರುಗಳ ವಿರುದ್ಧ ರವೀಂದ್ರ ಜಡೇಜಾ ಪ್ರಾಬಲ್ಯ ಮೆರೆದಿದ್ದಾರೆ. ಟೀಂ ಇಂಡಿಯಾ ಪಾಲಿನ ಪ್ರಮುಖ ಸ್ಪಿನ್‌ ಅಸ್ತ್ರವಾಗಿರುವ ಜಡೇಜಾ, ಎಲ್ಲಾ ಮಾದರಿ ಕ್ರಿಕೆಟ್‌ನಿಂದ 500 ವಿಕೆಟ್‌ಗಳನ್ನ ಪಡೆಯುವ ಜೊತೆಗೆ 5000 ರನ್‌ಗಳನ್ನ ಪೂರೈಸಿದ ಸಾಧನೆ ಸಹ ಮಾಡಿದರು. ಕಪಿಲ್‌ ದೇವ್‌ ನಂತರ ಭಾರತದ ಪರ ಈ ಸಾಧನೆ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೂ ಜಡೇಜಾ ಪಾತ್ರರಾದರು.

ಮೊದಲ ದಿನದಾಟದಲ್ಲಿ ಆಸೀಸ್‌ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿರುವ ರವೀಂದ್ರ ಜಡೇಜಾ 2ನೇ ದಿನದಾಟದಲ್ಲೂ ಮತ್ತಷ್ಟು ವಿಕೆಟ್‌ ಕಬಳಿಸುವ ನಿರೀಕ್ಷೆಯಲ್ಲಿದ್ದಾರೆ. ಒಂದೊಮ್ಮೆ ದಿನದಾಟದ ಆರಂಭದಲ್ಲೇ ಜಡೇಜಾ ತಮ್ಮ ಸ್ಪಿನ್‌ ಮೋಡಿ ಮಾಡಿದರೆ ಆಸೀಸ್‌ ತಂಡದ ಬೃಹತ್‌ ಮೊತ್ತ ಕಲೆಹಾಕುವ ನಿರೀಕ್ಷೆ ಹುಸಿಯಾಗಲಿದೆ.

More News