IND v/s AUS Test: ಆಸೀಸ್‌ ವಿರುದ್ಧದ 4ನೇ ಟೆಸ್ಟ್‌: ತೂಗುಯ್ಯಾಲೆಯಲ್ಲಿ ಕೆಎಸ್‌ ಭರತ್‌ ಸ್ಥಾನ?

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್‌ ಪಂದ್ಯ ಮಾ.9ರಿಂದ ಆರಂಭಗೊಳ್ಳಲಿದ್ದು, 4ನೇ ಟೆಸ್ಟ್‌ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಅಂತಿಮ ಪಂದ್ಯಕ್ಕೆ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸರಣಿಯ ಆರಂಭಿಕ ಎರಡು ಟೆಸ್ಟ್‌ಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದ್ದ ಭಾರತ 3ನೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ 4ನೇ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸರಣಿ ಗೆಲ್ಲುವ ಜೊತೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್ಷಿಪ್‌ ಫೈನಲ್‌ ಪ್ರವೇಶಿಸಬೇಕೆಂಬುದು ಭಾರತದ ಲೆಕ್ಕಾಚಾರ. ಇದಕ್ಕಾಗಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯ ಕೊನೆಯ ಟೆಸ್ಟ್‌ಗೆ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಲ್ಲಿ ಭಾರತ ಇದೆ.

ಪ್ರಮುಖವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ‌ ಸ್ಥಾನ ಪಡೆದಿರುವ ಯುವ ವಿಕೆಟ್‌ ಕೀಪರ್‌ ಕೆಎಸ್‌ ಭರತ್‌, 4ನೇ ಟೆಸ್ಟ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಭಾರತ ತಂಡದ ಪ್ರಮುಖ ವಿಕೆಟ್‌ ಕೀಪರ್‌ ರಿಷಬ್‌ ಪಂತ್ ಅನುಪಸ್ಥಿತಿಯಲ್ಲಿ ಕೆಎಸ್‌ ಭರತ್‌, ತಂಡದಲ್ಲಿ ಆಡುವ ಅವಕಾಶ ಪಡೆದರು. ಆದರೆ ತಮ್ಮ ಮೇಲಿನ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಭರತ್‌, ಯಶಸ್ವಿಯಾಗಿಲ್ಲ.
ವಿಕೆಟ್‌ ಕೀಪಿಂಗ್‌ನಲ್ಲಿ ಸಮಾಧಾನಕರ ಪ್ರದರ್ಶನ ನೀಡಿದ್ದರೂ, ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ನೀಡುವಲ್ಲಿ ಕೆಎಸ್‌ ಭರತ್‌ ವಿಫಲರಾಗಿದ್ದಾರೆ.

ಸರಣಿಯಲ್ಲಿ ಆಡಿರುವ 3 ಟೆಸ್ಟ್‌ಗಳಲ್ಲಿ 5 ಇನ್ನಿಂಗ್ಸ್‌ನಲ್ಲಿ ಭರತ್‌ ಕೇವಲ 57 ರನ್‌ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದರಿಂದಾಗಿ 29 ವರ್ಷದ ಕೆಎಸ್‌ ಭರತ್‌ ಅವರನ್ನ ಅಂತಿಮ ಟೆಸ್ಟ್‌ನಿಂದ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಇವರ ಸ್ಥಾನದಲ್ಲಿ ಇಶಾನ್‌ ಕಿಶನ್‌ ಅವರು ಆಡುವ ಸಾಧ್ಯತೆ ಇದೆ.

ಈ ನಡುವೆ ಟೀಂ ಇಂಡಿಯಾದ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌, ಯುವ ವಿಕೆಟ್‌ ಕೀಪರ್‌ ಭರತ್‌ ಅವರ ಬೆನ್ನಿಗೆ ನಿಂತಿದ್ದರು, ತಂಡಕ್ಕೆ ಬ್ಯಾಟಿಂಗ್‌ನಲ್ಲೂ ಸಹ ಆಸರೆಯಾಗುವ ಅಗತ್ಯವಿದೆ ಎಂದಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್‌ನಲ್ಲಿ ಕೆಎಸ್‌ ಭರತ್‌ ಅಥವಾ ಇಶಾನ್‌ ಕಿಶನ್‌ ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

More News