ಮಂಡ್ಯ: ಇಂದಿನಿಂದ ನಾನು ನನ್ನ ಸಂಪೂರ್ಣ ಬೆಂಬಲವನ್ನು ನರೇಂದ್ರ ಮೋದಿ ಅವರ ಸರ್ಕಾರ ಬಿಜೆಪಿಗೆ ನೀಡುತ್ತೇನೆ. ನನ್ನ ಆಪ್ತರು, ಕ್ಷೇತ್ರದ ಜನರ ಸಲಹೆ ಹಾಗೂ ನಾನು ಪೂಜಿಸೋ ಅಂಬರೀಶ್ ನೆನೆದು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸುವ ಮೂಲಕ ಸುಮಲತಾ ಅಂಬರೀಶ್ ಬಿಜೆಪಿ ಪರ ಇರುವುದಾಗಿ ಅಧಿಕೃತ ಘೋಷಣೆ ಮಾಡಿಸಿದರು.
ಚುನಾವಣಾ ಮಹಾಸಮರಕ್ಕೆ ಮಂಡ್ಯ ಅಖಾಡ ರಂಗೇರಿದೆ. ಮಂಡ್ಯ ಕಡೆ ಕಣ್ಣಿಟ್ಟಿರುವ ಬಿಜೆಪಿಗೆ ಪಕ್ಷೇತರ ಸಂಸದೆ ಸುಮಲತಾ ಸೇರ್ತಾರೆ. ಈ ಮೂಲಕ ಬಿಜೆಪಿಗೆ ಬಲ ತುಂಬ್ತಾರೆ ಎಂಬ ಸದ್ದು ಸುದ್ದಿ ಬೆನ್ನಲ್ಲೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗೋ ಕುರಿತು ಘೋಷಣೆ ಮಾಡಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ಪತ್ರಿಕಾ ಗೋಷ್ಠಿ ನಡೆಸಿ, ತಾವು ಕ್ಷೇತ್ರದಲ್ಲಿ ಮಾಡಿದ ಕೆಲಸದ ದಾಖಲೆ ಸಮೇತ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ತಾವು ಬಿಜೆಪಿ ಸೇರೋದನ್ನು ಖಚಿತಪಡಿಸಿದ್ದಾರೆ. ಬಿಜೆಪಿಗೆ ಬೆಂಬಲವನ್ನು ಘೋಷಣೆ ಮಾಡುತ್ತಿದ್ದೇನೆ. ಆದರೆ, ಅಧಿಕೃತವಾಗಿ ಪಕ್ಷ ಸೇರಲು ತಾಂತ್ರಿಕ ತೊಡಕುಗಳಿವೆ. ಅದೆಲ್ಲವೂ ಕ್ಲಿಯರ್ ಆದ ಬಳಿಕ ಪಕ್ಷವನ್ನು ಸೇರಿಕೊಳ್ಳಲಿದ್ದೇನೆ ಎಂದು ಮಾಹಿತಿ ನೀಡಿದರು.
ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಶೀಘ್ರದಲ್ಲೇ ರಾಜಕೀಯ ಕ್ಕೆ..?
ಇನ್ನು ಮಗನ ರಾಜಕೀಯ ಕುರಿತು ಮಾತನಾಡಿದ ಅವರು, ಒಂದು ವರ್ಷದಿಂದ ಬಿಜೆಪಿಯವರು ನನಗೆ ಆಹ್ವಾನ ನೀಡಿದ್ದಾರೆ. ನಾನೆಂದೂ ಕುಟುಂಬ ರಾಜಕಾರಣ ಮಾಡೋದಿಲ್ಲ. ಅಭಿಷೇಕ್‌ಗೆ ನಾನು ಎಲ್ಲಿಯೂ ಟಿಕೆಟ್ ಕೇಳಲ್ಲ. ಇದು ಚಾಮುಂಡೇಶ್ವರಿ ತಾಯಿಯ ಮೇಲೆ ಆಣೆ.
ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್ ಅಂಬರೀಶ್ ರಾಜಕಾರಣಕ್ಕೆ ಬರೋದಿಲ್ಲ. ನನ್ನ ಮಗನ ಭವಿಷ್ಯವನ್ನು ಚಾಮುಂಡಿ ತಾಯಿಯೇ ನೋಡಿಕೊಳ್ಳುತ್ತಾಳೆ. ಚುನಾವಣೆಗೆ ನಿಲ್ಲುವಂತೆ ಅಭಿಷೇಕ್‌ಗೆ ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ನಾನು ರಾಜಕೀಯ ಪ್ರವೇಶ ಮಾಡಿ 4 ವರ್ಷ ಕಳೆದಿದೆ. ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕ. ನನ್ನ ಸ್ವಾರ್ಥಕ್ಕೆ ರಾಜಕೀಯ ಪ್ರವೇಶ ಆಗಲಿಲ್ಲ. ಜನರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದಿದ್ದೇನೆ. ನನ್ನ, ಮಗನ ಭವಿಷ್ಯ ಯೋಚಿಸಿದ್ದರೆ ನನ್ನ ಹೆಜ್ಜೆ ಬೇರೆ ಆಗಿರುತ್ತಿತ್ತು. ಅಂಬರೀಶ್ ಅವರಿಗಿದ್ದ ಪ್ರಭಾವ ಬಳಸಿ ನಾನು ಅಧಿಕಾರ ಪಡೆಯಬಹುದಿತ್ತು. ಆದರೆ ನಾನು ಸ್ವಾರ್ಥಕ್ಕೆ ರಾಜಕಾರಣ ಮಾಡಿಲ್ಲ ಎಂದು ತಿಳಿಸಿದರು.

ಸರ್ಕಾರ ಎದುರಿಸಿ ನಾನು ಚುನಾವಣೆ ನಿಲ್ಲಲಿದ್ದೇನೆ ಅನ್ನೋ ಯೋಚನೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದೆ. ಜನರು ತೋರಿದ ಅಭಿಮಾನ ಪ್ರೀತಿಗೆ ಬೆಲೆ ಕೊಡದಿದ್ದರೆ ಮನುಷ್ಯತ್ವ ಇಲ್ಲದಂತಾಗುತ್ತಿತ್ತು. ಅಂಬರೀಶ್ ಅವರು ಇದ್ದಿದ್ರೂ ನನ್ನ ನಡೆಗೆ ಸಪೋರ್ಟ್ ಮಾಡ್ತಿದ್ರು ಎಂದು ತಿಳಿಸಿದರು.




