ದೇಶದಲ್ಲಿರೋದು ನೀಚ ರಾವಣ ಸರ್ಕಾರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು : ‘ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆಗೆ ನೈತಿಕ ಹೊಣೆಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೋಡಿ ಜನ ಆತಂಕಪಡುತ್ತಿದ್ದಾರೆ. ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲವಾಗಿದೆ. ತನ್ನ ರಕ್ಷಣೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ಅನ್ನದಾತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಕಗ್ಗೊಲೆ ಮಾಡಲಾಗಿದೆ. ರೈತರ ಹತ್ಯೆ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 302 ಪ್ರಕಾರ ಕೊಲೆ ಮೊಕದ್ದಮೆ ದಾಖಲು ಮಾಡಿ, ಬಂಧಿಸಬೇಕು. ಮಿಶ್ರಾ ಅವರನ್ನೂ ಬಂಧಿಸಬೇಕು. ಹತ್ಯೆಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇದು ಬರೀ ನಾಲ್ವರು ರೈತರ ಕೊಲೆ ಮಾತ್ರವಲ್ಲ. ಇಡೀ ದೇಶದ ರೈತ ಸಮುದಾಯದ ಕೊಲೆ. ಪ್ರಜಾತಂತ್ರ ವ್ಯವಸ್ಥೆಯ ಕೊಲೆ. ಬಲಿಯಾದ ರೈತರ ಕುಟುಂಬ ಭೇಟಿ ಮಾಡಲು ಮುಂದಾದ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿರುವುದು ಖಂಡನೀಯ. ಯಾವುದೇ ವಾರೆಂಟ್ ಇಲ್ಲದಿದ್ದರೂ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು, ಪುರುಷ ಪೊಲೀಸ್ ಅಧಿಕಾರಿಗಳು ಪ್ರಿಯಾಂಕಾ ಗಾಂಧಿ ಅವರ ಮೈ ಮೇಲೆ ಕೈ ಹಾಕಿ ಎಳೆದಾಡಿದ್ದಾರೆ. ಇದು ಇಡೀ ದೇಶದ ಮಹಿಳೆಯರಿಗೆ ಮಾಡಿದ ಅಪಮಾನ. ಈ ರೀತಿ ನಡೆದುಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಅವರು ಯಾವ ಅಪರಾಧ ಮಾಡಿದ್ದರು? ಯಾಕಾಗಿ ಅವರನ್ನು ಬಂಧಿಸಿದ್ದಾರೆ? ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುವುದು ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.

ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿ. ಸಾಂತ್ವನ ಹೇಳಲು ಹೋದವರನ್ನೇ ಬಂಧಿಸುವುದು ಬಿಜೆಪಿಯ ಯಾವ ಸಂಸ್ಕೃತಿ? ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತಿದೆ. ಸರ್ವಾಧಿಕಾರಿ, ಹಿಟ್ಲರ್ ಮನಸ್ಥಿತಿಯ ಸರ್ಕಾರದ ಕ್ರೌರ್ಯ ಮಿತಿ ಮೀರಿದೆ. ರಾಮ ರಾಜ್ಯ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ನಿರ್ಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಅನ್ನದಾತ ಕಳೆದ 10 ತಿಂಗಳಿಂದ ಶಾಂತಿಯುತ ಪ್ರತಿಭಟನೆ ಮಾಡಿ, ತಮ್ಮ ಭವಿಷ್ಯಕ್ಕೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆಗಳ ರದ್ಧತಿಗೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಬ್ರಿಟೀಷರು ಕೂಡ ಈ ರೀತಿ ನಡೆದುಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ರೈತರನ್ನು ಮಾತುಕತೆಗೆ ಕರೆಯದೆ, ಹತ್ಯೆ ಮಾಡುವ ಮೂಲಕ ಬ್ರಿಟಿಷರನ್ನು ಮೀರಿಸುವ ಕ್ರೌರ್ಯ ಮೆರೆದಿದೆ ಎದರು.

ದೇಶದ ಅನ್ನದಾತನ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಬಿಜೆಪಿಯ ಈ ದರ್ಪವನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೇಂದ್ರ ಸರ್ಕಾರ ಇನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ, ಕಾನೂನು, ಸಂವಿಧಾನಕ್ಕೆ ಬೆಲೆ ಕೊಟ್ಟು, ತನ್ನ ಸರ್ವಾಧಿಕಾರ ಮನಸ್ಥಿತಿಯಿಂದ ಹೊರಬರಬೇಕು. ರೈತರ ಜತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜನರೇ ಈ ಸರ್ಕಾರವನ್ನು ಕಿತ್ತೊಗೆದು ದೇಶದ ರೈತರು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸಬೇಕು ಎಂದರು.

ತಾಲಿಬಾನ್ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವುದು ನಾಚಿಕೆಗೇಡಿ ಸಂಗತಿ. ತೊಂದರೆಗೊಳಗಾದ ರೈತರ ಬಳಿ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರತಿಪಕ್ಷದ ಕೆಲಸ. ಇದಕ್ಕೆ ಅವರು ತಡೆಯುತ್ತಿದ್ದಾರೆ. ಇದು ತಾಲಿಬಾನ್ ಸರ್ಕಾರ ಎಂದು  ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದು ಪ್ರಜಾಪ್ರಭುತ್ವದ ಕಗ್ಗೂಲೆ, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಜಂಟಿಯಾಗಿ ನಡೆಸುತ್ತಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ,  

ರೈತರ ಪ್ರಾಣವನ್ನು ಬಲಿತೆಗೆದುಕೊಂಡ ಕೇಂದ್ರ ಸಚಿವ ಮತ್ತು ಆತನ ಪುತ್ರನನ್ನು ತಕ್ಷಣವೇ ಬಂಧಿಸಬೇಕು ಹಾಗೂ ಅಲ್ಲಿನ ರೈತರಿಗೆ ಸೂಕ್ತ ರೀತಿಯ ರಕ್ಷಣೆ ನೀಡಬೇಕೆಂದು ಅವರು ಟ್ವೀಟರ್ ಮೂಲಕ ಆಗ್ರಹಿಸಿದ್ದಾರೆ.  ದೇಶವನ್ನೇ ಗೂಂಡಾ ಸಂಸ್ಕೃತಿಯತ್ತ ಕೇಂದ್ರ ತಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು; ಸರ್ಕಾರಕ್ಕೆ ಒಂದು ತಿಂಗಳ ಗಡುವು:

ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದವರು. ಅದಕ್ಕೆ ಸಂಬಂಧಿಸಿದ ಕಾನೂನು ಬಲ್ಲವರು. ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೇ ನಾವು ಕೂಡ ಇಷ್ಟುದಿನಗಳಿಂದ ಹೇಳುತ್ತಾ ಬಂದಿದ್ದೇವೆ. ನೀವು ಮುಖ್ಯಮಂತ್ರಿಗಳಾದಾಗಿನಿಂದ ಈ ನಿಟ್ಟಿನಲ್ಲಿ ಯಾವುದೇ ಕೈಗೊಂಡಿಲ್ಲ, ಯಾಕೆ? ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಕೃಷ್ಣ, ಮಹದಾಯಿ ಯೋಜನೆ ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ, ಯಾಕೆ? ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕೃಷ್ಣ ವಿಚಾರದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ನೀರು, ಜಮೀನು, ಹಣ ಯಾವುದೂ ಬೇಕಿಲ್ಲ. ರಾಜ್ಯದ ನೀರಾವರಿ ವಿಚಾರಗಳು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗಳ ಕಾಮಗಾರಿ ಆರಂಭಿಸಲು ಬೇಕಾದ ಕಾರ್ಯಕ್ರಮ ರೂಪಿಸಲು ಸರ್ಕಾರಕ್ಕೆ 1 ತಿಂಗಳ ಗಡುವು ನೀಡಲಾಗುವುದು, ಸರ್ಕಾರ ನೀರಾವರಿ ಹಾಗೂ ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ನೀತಿ ನಿಲ್ಲಿಸಿ, ಯೋಜನೆಗಳ ಕಾಮಗಾರಿ ಆರಂಭಿಸದಿದ್ದರೆ ನಾವು ಮುಂದಿನ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರವೇ ಇಲ್ಲದ ಪರಿಸ್ಥಿತಿ

ರಾಜಧಾನಿಯಲ್ಲಿ ಧಾರಾಕಾರ ಮಳೆ ಬಿದ್ದು ಮನೆಗಳಿಗೆ ನೀರು ನುಗ್ಗಿದ್ದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಹೊಣೆಗಾರಿಕೆ ಇಲ್ಲವಾಗಿದೆ. ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ.

ನಿನ್ನೆ ಸರ್ಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿದ್ದಾರೆ. ರಾಜ್ಯಕ್ಕೆ ಸಂಬಂಧಪಡದ ಜೆ.ಪಿ ನಡ್ಡಾ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದು, ರಾಜ್ಯದಲ್ಲಿರುವ ಮುಖ್ಯಕಾರ್ಯದರ್ಶಿ, ಅಧಿಕಾರಿಗಳು, ಆಯುಕ್ತರಿಗೆ ಸಾಮಾನ್ಯ ಪರಿಜ್ಞಾನವೇ ಇಲ್ಲದಂತಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ನಾವು ಧ್ವನಿ ಎತ್ತುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಧೃವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಪ್ರದೇಶ ಕಾಂಗ್ರೆಸ್ ರೈತ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರು ಉಪಸ್ಥಿತರಿದ್ದರು. ಈ ವೇಳೆ ಶಿವಕುಮಾರ್ ಅವರು ಹೇಳಿದ್ದಿಷ್ಟು;

More News